ಚಿಕ್ಕಮಗಳೂರು: ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ ಮದ್ಯ ಮಾರಾಟ ಕೂಡ ಸ್ಥಗಿತಗೊಂಡಿದೆ. ಪೊಲೀಸರು ಮದ್ಯದ ಅಂಗಡಿಗಳನ್ನ ಸೀಜ್ ಮಾಡಿದ್ದರಿಂದ ಕದ್ದುಮುಚ್ಚಿಯೂ ಮದ್ಯ ಕೊಳ್ಳಲು ಮದ್ಯ ಪ್ರಿಯರಿಗೆ ಸಾಧ್ಯವಾಗುತ್ತಿಲ್ಲ. ಕಳೆದೊಂದು ವಾರದಿಂದ ಮದ್ಯಕ್ಕಾಗಿ ಎಷ್ಟೇ ಹುಡುಕಾಡಿದರು ಎಣ್ಣೆ ಸಿಗದ ಕಾರಣ ವ್ಯಕ್ತಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಮೃತನನ್ನ ಮೂಡಿಗೆರೆಯ ಯೋಗೀಶ್(40) ಎಂದು ಗುರುತಿಸಲಾಗಿದೆ. ಈತ ಮೂಡಿಗೆರೆಯ ಹೊಟೇಲ್ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದನು. ಕುಡಿತದ ಚಟಕ್ಕೆ ದಾಸನಾಗಿದ್ದ ಈತನಿಗೆ ಲಾಕ್‍ಡೌನ್ ಜಾರಿಯಾದ ಬಳಿಕ ಎಲ್ಲೂ ಎಣ್ಣೆ ಸಿಗ್ತಿರಲಿಲ್ಲ. ಮದ್ಯ ಇಲ್ಲದೆ ಇರಲು ಆಗುತ್ತಿಲ್ಲ ಎಂದು ತನ್ನ ಸ್ನೇಹಿತರ ಬಳಿ ಯೋಗೇಶ್ ಹೇಳಿಕೊಂಡಿದ್ದನು. ಕಳೆದ ನಾಲ್ಕು ದಿನಗಳ ಹಿಂದೆ ಎಲ್ಲೂ ಎಣ್ಣೆ ಸಿಗದ ಕಾರಣ ಮಾನಸಿಕ ಖಿನ್ನತೆಗೊಳಗಾಗಿದ್ದನು. ಈ ಕಾರಣಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
Advertisement
Advertisement
ಯೋಗೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಬಾವಿಯ ಸುತ್ತಮುತ್ತ ಓಡಾಡುವಾಗ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ಇಂದು ಬಾವಿಯಲ್ಲಿ ಸ್ಥಳೀಯರು ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತನ ಕೈಯಲ್ಲಿದ್ದ ಬಳೆ ಹಾಗೂ ಶರ್ಟ್ ನೋಡಿ ಯೋಗೇಶ್ ಎಂದು ಅವನ ಸ್ನೇಹಿತರು ಪತ್ತೆ ಹಚ್ಚಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.