– ಹಾಸನದಲ್ಲೂ ಅಬ್ಬರಿಸುತ್ತಿರುವ ವರಣುದೇವ
ಚಿಕ್ಕಮಗಳೂರು/ಹಾಸನ: ಕಾಫಿನಾಡಿನಲ್ಲಿ ಮತ್ತೆ ಮಳೆಯ ಅರ್ಭಟ ಶುರುವಾಗಿದ್ದು, ಮಳೆಯ ಜೊತೆ ಭೂಮಿಯೊಳಗಿಂದ ಬರುತ್ತಿರುವ ವಿಚಿತ್ರ ಶಬ್ಧ ಅಲ್ಲಿನ ಜನರು ಭಯಭೀತಾರನ್ನಾಗಿ ಮಾಡಿದೆ.
ಮೂಡಿಗೆರೆ ತಾಲೂಕಿನಾದ್ಯಂತ ಬೈರಾಪುರ, ಊರುಬಗೆ ಮತ್ತು ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಊರುಬಗೆಯಲ್ಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಗದ್ದೆಗಳು ಜಲಾವೃತವಾಗಿವೆ. ಅಲೇಖಾನ್ ಹೊರಟ್ಟಿ, ಬಾಳೂರು, ಸುಂಕಸಾಲೆ, ದುರ್ಗದಹಳ್ಳಿಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ದುರ್ಗದಹಳ್ಳಿಯಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿರುವುದು ಜನರನ್ನು ಅತಂಕಕ್ಕೆ ಕಾರಣವಾಗಿದೆ. ಎನ್.ಆರ್ ಪುರ, ಕೊಪ್ಪ, ಶೃಂಗೇರಿ ತಾಲೂಕುಗಳಲ್ಲೂ ಮಳೆ ಮುಂದುವರಿದಿದೆ.
Advertisement
Advertisement
ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕಳಸ ಹೊರನಾಡಿನ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದೇ ಒಂದು ಅಡಿಯಷ್ಟು ಮಾತ್ರ ಬಾಕಿ ಉಳಿದಿದೆ. ದಿನ ಪೂರ್ತಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು. ಮತ್ತೆ ಮಲೆನಾಡಿನ ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
Advertisement
ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರಿಸಿ ಹೋಗಿದೆ. ಧಾರಾಕಾರ ಮಳೆಗೆ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು, ಸಂಚಾರಕ್ಕೆ ವ್ಯತ್ಯಯವಾಗಿದೆ. ಹಲವಡೆ ವಿದ್ಯತ್ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಹೇಮಾವತಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿ ಗುಡ್ಡಗಾಡು ಪ್ರದೇಶದ ಹಳ್ಳಿಗಳಿಂದ ಜನರು ಹೊರಬರುತ್ತಿದ್ದಾರೆ. ಈ ನಡುವೆ ಮಳೆಯ ಕಾರಣದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶಾಲೆಗೆ ಹೋಗಲು ಪರದಾಡುವ ಸ್ಥಿತಿ ಉಂಟಾಗಿದೆ.
Advertisement
ಹಾಸನ ಜಿಲ್ಲೆಯಲ್ಲಿ ಕಳೆದ ಆಗಸ್ಟ್ ಆರಂಭದಲ್ಲಿ ಆರ್ಭಟಿಸಿದ ಮಳೆಯಾಘಾತದಿಂದ ಇನ್ನೂ ಸಂತ್ರಸ್ತರು ಸುಧಾರಿಸಿಕೊಂಡಿಲ್ಲ. ಮಳೆಯಿಂದ ತತ್ತರಿಸಿರುವ ಸಕಲೇಶಪುರ, ಅರಕಲಗೂಡು, ಆಲೂರು ಸೇರಿದಂತೆ ಜನ ಜಾನುವಾರು ಸುಭದ್ರ ನೆಲೆಗಾಗಿ ಹುಡುಕಾಟ ಮುಂದುವರಿಸಿದ್ದು, ಹೊಸ ಜೀವನದ ಕನಸಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆಯೇ ಕಳೆದ ಹದಿನೈದು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಆರಂಭವಾಗಿರುವುದರಿಂದ ಮಲೆನಾಡು ಭಾಗದ ಜನರಲ್ಲಿ ಮತ್ತೆ ಮುಳುಗಡೆ ಭೀತಿ ಎದುರಾಗಿದೆ.
ಈ ಹಿಂದೆ ಆಗಿರುವ ನಷ್ಟಕ್ಕೇ ಯಾವುದೇ ಪರಿಹಾರ ಈವರೆಗೂ ಸಿಕ್ಕಿಲ್ಲ. ಈಗ ಪುನಃ ಮಳೆಯಾದರೆ ನಮ್ಮ ಗತಿ ಏನು ಎಂದು ಜನರು ಆತಂಕದಲ್ಲಿ ದಿನದೂಡುವಂತಾಗಿದೆ. ಸಕಲೇಶಪುರ ಪಟ್ಟಣದ ಆಝಾದ್ ರಸ್ತೆಯಲ್ಲಿ ಕಳೆದಬಾರಿ ಮಳೆಯಲ್ಲಿ ನಲುಗಿದ್ದ ಸ್ಥಳೀಯರು ಈ ಭಾರಿಯೂ ನೀರು ಒಳನುಗ್ಗಬಹುದು ಎಂಬ ಅತಂಕದಲ್ಲಿದ್ದಾರೆ. ಬೆಂಗಳೂರು ಮಂಗಳೂರು ನಡುವಿನ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಶಿರಾಡಿಯಲ್ಲಿಯೂ ಕೂಡ ಆತಂಕದಲ್ಲಿ ವಾಹನ ಸವಾರರ ಪ್ರಯಾಣ ನಡೆಸುವಂತಾಗಿದೆ.
ಕಾಫಿ ಬೆಳೆ, ಭತ್ತ, ಮೆಣಸು ಸೇರಿದಂತೆ ಹಲವು ಬೆಳೆ ನಷ್ಟವಾಗಿದ್ದು, ಈಗ ಮತ್ತೆ ಬರುತ್ತಿರುವ ಮಳೆ ರೈತರಿಗೆ ಆತಂಕವನ್ನುಂಟು ಮಾಡಿದೆ. ಕಳೆದ ಬಾರಿಯ ನೆರೆಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ಥರು ಕೂಡ ಪರಿಹಾರ ಸಿಗದೆ ಪರದಾಡುವ ಪರಿಸ್ಥಿತಿಯಲ್ಲಿದ್ದು ಮತ್ತೆ ಮಳೆಯಿಂದಾಗಿ ಆತಂಕದಲ್ಲಿದ್ದಾರೆ.