ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮರಣವಾದ ಒಂದು ತಿಂಗಳೊಳಗೆ ಅವರ ತಂದೆ ಗಂಗಯ್ಯ ಹೆಗ್ಡೆ(96) ನಿಧನರಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಗಂಗಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋಮಾದಲ್ಲಿದ್ದ ಗಂಗಯ್ಯ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಸಾವಿನ ವಿಚಾರವೂ ತಂದೆಗೆ ತಿಳಿದಿರಲಿಲ್ಲ. ಮಗ ಸಿದ್ಧಾರ್ಥ್ ಹೆಗಡೆ ಕಳೆದ ತಿಂಗಳು 29ರಂದು ಮಂಗಳೂರಿನಲ್ಲಿ ಉಳ್ಳಾಲ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಆ ಬಳಿಕ ಅವರ ಪತ್ತೆಗೆ ಎಲ್ಲಾ ರೀತಿಯಲ್ಲೂ ಕಾರ್ಯಾಚರಣೆಯನ್ನು ನಡೆಸಲಾಗುತ್ತಿತ್ತು. ಈ ಮಧ್ಯೆ ಮೀನುಗಾರರೊಬ್ಬರಿಗೆ ಸಿದ್ಧಾರ್ಥ್ ಶವ ತೇಲುತ್ತಿರುವುದು ಕಂಡು ಬಂದಿದೆ. ನಂತರ ಅವರು ಶವವನ್ನು ದೋಣಿ ಬದಿಯಲ್ಲಿ ಹಿಡಿದುಕೊಂಡು ದಡಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ವೈರಲ್ ಆಯ್ತು ಅಪ್ಪನ ಜೊತೆಗಿನ ಸಿದ್ದಾರ್ಥ್ ಫೋಟೋ
ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರಿಖ್ಷೆ ನಡೆಸಿ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನಿ ಅವರ ಸ್ವಗ್ರಾಮ ಮೂಡಿಗೆರೆಯ ಚೇತನಹಳ್ಳಿ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದೀಗ ತಂದೆಯ ಅಂತ್ಯಕ್ರಿಯೆ ಕೂಡ ಸೋಮವಾರ ಚೇತನಹಳ್ಳಿ ಎಸ್ಟೇಟ್ ನಲ್ಲಿ ನಡೆಯಲಿದೆ ಎಂಬುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ.