ಚಿಕ್ಕಮಗಳೂರು: ಈ ಬಾರಿ ಮಳೆ ಕೇವಲ ಜನಜೀವನವನ್ನಷ್ಟೇ ಅತಂತ್ರಗೊಳಿಸಿಲ್ಲ. ದೈನಂದಿನ ಬದುಕಿನ ಮೇಲೂ ಪರಿಣಾಮ ಬಿದ್ದಿದೆ. ಜಲರಾಕ್ಷಸನ ಅಟ್ಟಹಾಸಕ್ಕೆ ಸಂಪರ್ಕ ಕೊಂಡಿಗಳೇ ಕಳಚಿ ಬಿದ್ದಿವೆ.
ಹೌದು. ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗಗಳಲ್ಲಿ ಈ ಬಾರಿ ಕಂಡು-ಕೇಳರಿಯದ ಮಳೆ ಸುರಿದಿದೆ. ಇದರಿಂದ ಒಂದಲ್ಲ-ಎರಡಲ್ಲ 15ಕ್ಕೂ ಹೆಚ್ಚು ಸೇತುವೆಗಳು, ಕಿರುಸೇತುವೆಗಳು, ಕಾಲು ಸಂಕಗಳು ಮಳೆ ನೀರಲ್ಲಿ ಕೊಚ್ಚಿಹೋಗಿವೆ. ಮೂಡಿಗೆರೆಯ ಮಾಳಿಗನಾಡು, ಬಂಕೇನಹಳ್ಳಿ, ಹೊಯ್ಸಳಲು, ಮುದ್ರೆಮನೆ, ಹೊಕ್ಕಳ್ಳಿಕೊಪ್ಪದಲ್ಲಿ ಈ ಹಿಂದೆ ಇದ್ದ ಸೇತುವೆಗಳು ಈಗಿಲ್ಲ. ಮುಗ್ರಹಳ್ಳಿ ಸೇರಿದಂತೆ ಹಲವೆಡೆ ಅಳಿದುಳಿದಿರೋ ಸೇತುವೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಬಾರಿ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಶಿವು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸದ್ಯ, ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದು, ಆದರೂ ಕೊಚ್ಚಿ ಹೋದ ಸೇತುವೆಗಳನ್ನ ದುರಸ್ತಿಗೊಳಿಸೋ ಕಾರ್ಯಕ್ಕೆ ಸರ್ಕಾರ ಮುಂದಾಗಿಲ್ಲ. ಕಡೂರು ಹಾಗೂ ತರೀಕೆರೆ ತಾಲೂಕಿನಲ್ಲೂ ಸೇತುವೆಗಳು ಕೊಚ್ಚಿ ಹೋಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಬಾಳೆಹೊನ್ನೂರು ಸೇತುವೆಯೂ ಬಿರುಕು ಬಿಟ್ಟಿದೆ. ಮೂರು ತಿಂಗಳಿನಿಂದ ಒಂದರ ಮೇಲೊಂದರಂತೆ ಸೇತುವೆಗಳು ಕೊಚ್ಚಿ ಹೋಗ್ತಿದ್ದು, ಸಂಪರ್ಕ ಕಳೆದುಕೊಂಡು ಜನ ಪರದಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.
Advertisement
Advertisement
ಒಟ್ಟಿನಲ್ಲಿ ಈ ಬಾರಿ ಮಳೆರಾಯ ಮಲೆನಾಡಿನ ಜನರಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾನೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡು ಸೇತುವೆ ಪುನರ್‌ನಿರ್ಮಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.