ಚಿಕ್ಕಮಗಳೂರು: ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವಿರಮ್ಮ ದೇಗುಲಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ.
ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟವು 3 ಸಾವಿರ ಅಡಿ ಎತ್ತರವಿದ್ದು, ಜಿಲ್ಲೆ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಚಿಕ್ಕಮಗಳೂರು ನಗರ ಸೇರಿದಂತೆ ಮಲ್ಲೇನಹಳ್ಳಿಯಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಒದಗಿಸಲಾಗಿದೆ.
Advertisement
Advertisement
ವಿಶೇಷತೆ ಏನು?:
ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುತ್ತದೆ. ಅಂದು ದೀಪ ಹಚ್ಚುವುದು, ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಬೆಟ್ಟದಲ್ಲಿ ಕಡಿದಾದ ಅಂಕು ಡೊಂಕಿನ ಹಾದಿಯಿದ್ದು, ಸಾಲು-ಸಾಲಾಗಿ ಜನರು ಬೆಟ್ಟ ಹತ್ತುತ್ತಾರೆ.
Advertisement
ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೇ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯವಿದ್ದು, ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡಲಾಗುತ್ತದೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ, ವಿಶ್ರಾಂತಿ ಪಡೆದು ಮತ್ತೆ ಕೆಳಗೆ ಇಳಿಯುತ್ತಾರೆ. ಬೆಟ್ಟ ಏರುವುದು ಎಷ್ಟು ಕಷ್ಟವೋ ಅಷ್ಟೇ ಪ್ರಮಾಣದಲ್ಲಿ ಇಳಿಯುವುದೂ ಸಾಹಸವೇ ಆಗಿದೆ.
Advertisement
ರಾಜ್ಯ ಸೇರಿದಂತೆ, ನೆರೆಯ ರಾಜ್ಯಗಳಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ದಣಿವು, ಆಯಾಸವನ್ನು ಲೆಕ್ಕಿಸದೇ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯುತ್ತಾರೆ. ಬೆಟ್ಟದ ಮೇಲೆ ಅಥವಾ ಅಡಿಯಲ್ಲಿ ನಿಂತು ನೋಡಿದರೆ, ಬೆಟ್ಟ ಏರುವ ದೃಶ್ಯವು ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಕಾಣುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬರುವುದರಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ.
ಬಿಂಡಿಗ ದೇವಿರಮ್ಮ ದೇಗುಲದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ನಡೆಯುತ್ತದೆ. ಮತ್ತೆ ರಾತ್ರಿ ದೀಪವನ್ನು ಹಚ್ಚಲಾಗುತ್ತದೆ. ದೇಗುಲದಲ್ಲಿ ದೀಪ ಹಚ್ಚಿದ ಬಳಿಕ, ಸುತ್ತಮುತ್ತಲಿನ ಗ್ರಾಮಗಳ ಮನೆಗಳಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv