ಚಿಕ್ಕಬಳ್ಳಾಪುರ: 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಾಗ್ತೀನಿ ಅಂತ ಸ್ವಾಮೀಜಿಯೋರ್ವ ಗುಂಡಿ ತೆಗೆಸಿ ಸಕಲ ಸಿದ್ಧತೆ ಮಾಡಿಕೊಂಡು ಕೊನೆಗೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮಕ್ಕೆ ಆಗಮಿಸಿದ್ದ ಸ್ವಾಮೀಜಿಯೋರ್ವ ಗ್ರಾಮಸ್ಥರ ಜಮೀನುವೊಂದರ ಬಳಿ 9 ಅಡಿ ಆಳದ ಬೃಹದಾಕಾರದ ಗುಂಡಿ ತೆಗೆಯಲಾಗಿತ್ತು. ಗುಂಡಿಯೊಳಗೆ ತಾನು 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿ ಆಗುವುದಾಗಿ ಪತ್ರಗಳನ್ನು ಹಂಚಿಕೆ ಮಾಡಿ ಪ್ರಚಾರ ಮಾಡಿದ್ದನು. ಅಂತೆಯೇ ಜೀವಂತ ಯೋಗ ಸಮಾಧಿಗೆ ಜಮೀನುವೊಂದರಲ್ಲಿ ಗುಂಡಿ ಅಗೆದು ಗುಂಡಿ ಮೇಲ್ಭಾಗವನ್ನ ನೀಲಗಿರಿ ಸೊಪ್ಪು ಚಾಪೆ ಹಾಕಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಿಕೊಂಡಿದ್ದ. ಇನ್ನೂ ಗುಂಡಿಯೊಳಗೆ ಇಳಿಯೋಕೆ ಅಂತ ಒಂದಷ್ಟು ಜಾಗ ಬಿಟ್ಟು ಏಣಿ ಹಾಕಿಕೊಂಡು ಸಕಲ ಸನ್ನದ್ಧನಾಗಿದ್ದನು.
ಹೇಳಿದಂತೆ ಇಂದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಯೋಗ ಸಮಾಧಿಗೆ ಸ್ವಾಮೀಜಿ ಸಕಲ ತಯಾರಿಗಿದ್ದ. ಆದರೆ ಅಷ್ಟರಲ್ಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ವಾಮೀಜಿ ಕಾರ್ಯಕ್ಕೆ ಅನುಮತಿ ಪಡೆದಿಲ್ಲ. ಈ ರೀತಿ ಮಾಡುವ ಹಾಗಿಲ್ಲ ಮಾಡಿದ್ರೇ ಕೇಸ್ ದಾಖಲಿಸ್ತೀವಿ ಅಂತ ಎಚ್ಚರಿಕೆ ಕೊಟ್ಟ ಹಿನ್ನೆಲೆ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ.
ಸ್ವಾಮೀಜಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಹಂಚಿದ್ದ ಪಾಂಪ್ಲೇಟ್ ನಲ್ಲಿ ‘ತಾರನೇಯಿ ಸಾಯಿ ಆದ ನಾನು ದೇವರ ಅನುಗ್ರಹದಿಂದ, ಭೂಮಿಯೊಳಗೆ 9 ಅಡಿ ಆಳದಲ್ಲಿ 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಗುತ್ತಿದ್ದೇನೆ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಶಿವಲೋಕಂ ಸೃಷ್ಠಿಸಿ ಆಶ್ರಮ ಮಾಡಿ ಶಿವನ ದೇವಾಲಯ, ಆರ್ಯುವೇದ ಹಾಗೂ ಹೀಲಿಂಗ್ ಸೆಂಟರ್ ಸೇರಿದಂತೆ ಯೋಗ, ಧ್ಯಾನ ಶಿಬಿರಗಳನ್ನ ಆಯೋಜಿಸಲಾಗುವುದು ಅಂತ ಪ್ರಕಟಿಸಿ ಹಂಚಲಾಗಿತ್ತು.
ಸದ್ಯ ಘಟನೆ ನಂತರ ಸ್ವಾಮೀಜಿ ಉತ್ತರಭಾರತ ಮೂಲದವನು ಅಂತ ಮಾಹಿತಿ ಸಿಕ್ಕಿದ್ದರೂ, ಈತ ಸ್ಪಷ್ಟವಾಗಿ ತೆಲುಗು ಭಾಷೆ ಮಾತನಾಡುತ್ತಿದ್ದ ಕಾರಣ ಆಂದ್ರಪ್ರದೇಶ ಮೂಲದವನು ಅಂತ ಹೇಳಲಾಗಿದೆ. ಇನ್ನೂ ಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್ ಎಂಬವರ ಮನೆಯಲ್ಲಿ ಕಳೆದ ಒಂದು ತಿಂಗಳಿನಿಂದ ವಾಸ್ತವ್ಯ ಹೂಡಿದ್ದು ಅವರದೇ ಜಮೀನಿನಲ್ಲಿ ಈ ರೀತಿ ಯೋಗ ಸಮಾಧಿಗೆ ಸ್ವಾಮೀಜಿ ಪ್ಲಾನ್ ಮಾಡಿ ಸದ್ಯ ಪೊಲೀಸರ ಭಯದಿಂದ ಪರಾರಿಯಾಗಿದ್ದಾನೆ.