ಚಿಕ್ಕಬಳ್ಳಾಪುರ: ಸಿಎಂ ಯಡಿಯೂರಪ್ಪ ಎಂದೂ ಕೂಡ ಕೊಟ್ಟ ಮಾತು ತಪ್ಪಿಲ್ಲ, ಹೀಗಾಗಿ ಈಗಲೂ ಸಹ ಯಡಿಯೂರಪ್ಪ ಮಾತು ತಪ್ಪಲ್ಲ ಎಂದು ಭಾವಿಸಿದ್ದೇನೆ ಅಂತ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು ಮಂತ್ರಿ ಸ್ಥಾನ ಕೊಡಲು ಸಿಎಂ ಒಳ್ಳೆಯ ಮೂಹೂರ್ತ ಇಟ್ಟಿದ್ದು, ಶುಭ ಗಳಿಗೆಯಲ್ಲಿ ಅಧಿಕಾರ ಕೊಡಲು ತೀರ್ಮಾನ ಮಾಡಿದ್ದಾರೆ. ಇದರಿಂದ ಶುಭ ಗಳಿಗೆಯಲ್ಲಿ ಕ್ಷೇತ್ರಕ್ಕೆ ರಾಜ್ಯಕ್ಕೆ ಒಳ್ಳೆಯದಾಗಲಿದೆ. ಸಂಕ್ರಾಂತಿ ಆದ ಮೇಲೆ ಒಳ್ಳೆಯ ದಿನಗಳಿದ್ದು, ಬಹುಶಃ ಸಂಕ್ರಾಂತಿ ಆದ ಮೇಲೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದರು. ಸೋತವರಿಗೆ ಮಂತ್ರಿ ಸ್ಥಾನ ಕೊಡೋದು ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿ ನುಣುಚಿಕೊಂಡರು.
ನಾನು ಸಿಎಂ ಆಗಿದ್ರೆ ಪ್ರಧಾನಿ ಮನೆ ಎದುರು ಧರಣಿ ಕೂರುತ್ತಿದ್ದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆದಾಗ ಎಷ್ಟು ಬಾರಿ ಧರಣಿ ಕೂತಿದ್ರು? ಎಷ್ಟು ಬಾರಿ ಧರಣಿ ಕೂತಿದ್ರು ಅಂತ ಜನತೆಗೆ ತಿಳಿಸಲಿ ಎಂದು ಪ್ರಶ್ನಿಸಿದರು. ಈಗಾಗಲೇ ನೆರೆ ಪರಿಹಾರಕ್ಕಾಗಿ ಎರಡು ಕಂತಲ್ಲಿ ಸರಿಸುಮಾರು 3000 ಕೋಟಿ ಹಣ ಬಂದಿದೆ. ಇದು ಬಿಡಿಗಾಸು ಎಂದು ಸಿದ್ದರಾಮಯ್ಯ ಹೇಳೋದು ಸರಿ ಅಲ್ಲ ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದರು.