-ಎಸ್‍ಪಿಗೆ ಅಬಕಾರಿ ಅಧಿಕಾರಿಗಳು ಒತ್ತಡ
-ಕ್ಯಾರೇ ಎನ್ನದ ಎಸ್‍ಪಿಗೆ ಜನರಿಂದ ಮೆಚ್ಚುಗೆ
ಚಿಕ್ಕಬಳ್ಳಾಪುರ: ಜಿಲ್ಲೆಗೆ ಬಂದ ನೂತನ ಅಧಿಕಾರಿಯೊಬ್ಬರು ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ್ದು, ಕೇವಲ 6 ತಿಂಗಳಲ್ಲೇ ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಒಂದು ಕಡೆ ಮಳೆಯಿಲ್ಲ, ಮತ್ತೊಂದೆಡೆ ಮಳೆಯಿಲ್ಲದೆ ಬೆಳೆಯೂ ಇಲ್ಲ. ಇತ್ತ ಸರ್ಕಾರ ಕುಡಿಯೋಕೆ ನೀರು ಕೊಡದಿದ್ದರೂ ಆ ಜಿಲ್ಲೆಗೆ ಸಾಕು ಎನ್ನುವಷ್ಟು ಮದ್ಯ ಸರಬರಾಜಾಗುತ್ತಿದೆ. ಹೀಗಾಗಿ ಪ್ರತಿ ಹಳ್ಳಿಯಲ್ಲಿರುವ ಚಿಲ್ಲರೆ ಅಂಗಡಿಗಳು ಮದ್ಯ ಮಾರಾಟ ಅಂಗಡಿಗಳಾಗಿ ಮಾರ್ಪಾಡಾಗಿದ್ದವು. ಇದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಂದಿ ಹಳ್ಳಿಗಳಲ್ಲಿನ ಚಿಲ್ಲರೆ ಅಂಗಡಿಗಳಲ್ಲೇ ಸಿಗುತ್ತಿದ್ದ ಮದ್ಯದ ಚಟಕ್ಕೆ ದಾಸರಾಗಿ ಬದುಕು ಹಾಳು ಮಾಡಿಕೊಂಡಿದ್ದರು.
Advertisement
Advertisement
ಈ ಬಗ್ಗೆ ಜಿಲ್ಲೆಗೆ ಬಂದ ನೂತನ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರಿಗೆ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಕರೆ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿಸುವಂತೆ ಮನವಿ ಮಾಡಿಕೊಂಡಿದ್ದರು. ಇದರಿಂದ ಎಚ್ಚೆತ್ತ ಎಸ್‍ಪಿ ಸಂತೋಷ್ ಬಾಬು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ ಹಗಲು ರಾತ್ರಿ ಎನ್ನದೆ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ಕಂಡು ಬಂದರೆ ಸಾಕು ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಂಡು ಕೇಸ್ ಮಾಡುವಂತೆ ತಾಕೀತು ಮಾಡಿದರು. ಹೀಗಾಗಿ ಕೇವಲ 6 ತಿಂಗಳಲ್ಲಿ 1000ಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟದ ಕೇಸ್ ದಾಖಲಾಗಿದ್ದು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದಂತಾಗಿದೆ.
Advertisement
Advertisement
ಜಿಲ್ಲೆಯ ಆರು ತಾಲೂಕುಗಳು, ಗಡಿಭಾಗದ ಹಳ್ಳಿಗಳಲ್ಲಂತೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿಯೇ ಇತ್ತು. ಅದರಲ್ಲೂ ಅನುಮತಿ ಪಡೆದಿರುವ ಬಾರ್ ಮಾಲೀಕರೇ ಸ್ವತಃ ಅಬಕಾರಿ ಅಧಿಕಾರಿಗಳ ಕೊಡುವ ಟಾರ್ಗೆಟ್ ರೀಚ್ ಮಾಡೋಕೆ ಹಳ್ಳಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದರು. ಆದರೆ ಈಗ ಅದೆಲ್ಲಕ್ಕೂ ಕಡಿವಾಣ ಬಿದ್ದಿದ್ದು ಎಸ್‍ಪಿ ಸಂತೋಷ್ ಬಾಬು ಕಾರ್ಯಕ್ಕೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸರು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಬ್ರೇಕ್ ಹಾಕಿದ್ದೇ ತಡ ಅಬಕಾರಿ ಇಲಾಖಾಧಿಕಾರಿಗಳು ಸರ್ ಟಾರ್ಗೆಟ್ ರೀಚ್ ಮಾಡೋಕೆ ಕಷ್ಟ ಆಗುತ್ತದೆ. ಕುಡಿಯೋರು ಕುಡಿಯಲಿ ಬಿಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ ಅಬಕಾರಿ ಅಧಿಕಾರಿಗಳು ಏನೇ ಹೇಳಿದರೂ ಕೇಳದ ಎಸ್‍ಪಿ ಮಾತ್ರ ಪ್ರತಿ ದಿನ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದು, ಪ್ರತಿದಿನ ಹತ್ತಾರು ಕೇಸ್ ದಾಖಲಾಗುತ್ತಿವೆ.