– ನಾಯಕರು ಸೇಲ್ ಆಗಬಹುದು, ಮತದಾರರು ಸೇಲ್ ಆಗಲ್ಲ
ಚಿಕ್ಕಬಳ್ಳಾಪುರ: ದುರಂಹಕಾರದಿಂದ ಮೆರೆದಾಡುವವರ ಆಟ ಏನೂ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಸುಧಾಕರ್ ಒಬ್ಬ ದುರಹಂಕಾರಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಇಂದು ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಜಿಲ್ಲೆಗೆ ರಮೇಶ್ ಕುಮಾರ್ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದ ಸುಧಾಕರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಪಂಚದ ವಿಚಾರವೇ ತಿಳಿದುಕೊಳ್ಳದೇ ಇರುವವರು ನಮ್ಮ ಬಗ್ಗೆ ಮಾತಾಡ್ತಾರೆ. ನಾವು ಅವರ ಬಗ್ಗೆ ಮಾತಾಡೊದು ಬೇಡ. ನಾವು ಬಹಳ ದೊಡ್ಡವರ ನೆರಳಲ್ಲಿ ಬದುಕಿದ್ದೇವೆ. ನಾನು ದೊಡ್ಡ ಮನುಷ್ಯ ಅಲ್ಲ. ಆದರೆ ನಾವು ಯಾರಿಂದಲೂ ಬುದ್ದಿ ಕಲಿಯಬೇಕಿಲ್ಲ. ನಾನು ಪಕ್ಷದ ಕಾರ್ಯಕರ್ತರಿಗೆ ಹಿತವಚನ ಹೇಳಲು ಬಂದಿರುವೆ. ನನಗೆ ಎಚ್ಚರಿಕೆ ಕೊಡುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಮಳೆ ಬರುವ ಆಗಿದ್ದರೆ ನನಗೆ ನಿಲ್ಲಿಸಲು ಯೋಗ್ಯತೆ ಇದೆಯೇ? ಮನುಷ್ಯನಿಗೆ ಬಹಳ ಇತಿ ಮಿತಿ ಇರಬೇಕು. ನಮಗೆ ಗೊತ್ತಿಲ್ಲದೇ ಇರುವುದನ್ನು ಕಂಟ್ರೋಲ್ ಮಾಡಲು ಯಾವುದೋ ಒಂದು ಶಕ್ತಿ ಇದೆ. ನನ್ನ ಕೊಡುಗೆ ಬಗ್ಗೆ ಅನರ್ಹ ಶಾಸಕ ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ಎಚ್ ಎನ್ ವ್ಯಾಲಿ, ವಿಶ್ವವಿದ್ಯಾಲಯ, ಡಯಾಲಿಸಿಸ್ ಘಟಕಗಳು, ಹೈವೇ ಮಾಡಿದ್ದೀವಿ ಇಷ್ಟು ಕೊಡುಗೆ ಕೊಟ್ಟಿದ್ದೀವಿ ಎಂದು ಸುಧಾಕರ್‍ಗೆ ಟಾಂಗ್ ನೀಡಿದರು.
ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿ, ನೋಡೋಣ ಕೋರ್ಟ್ ಏನು ಹೇಳುತ್ತೆ? ಜನ ಏನು ಹೇಳುತ್ತಾರೆ ಎಂದು. ನಾಯಕರು ಸೇಲ್ ಆಗಬಹುದು ಆದರೆ ಮತದಾರರು ಮಾರಾಟವಾಗುವುದಿಲ್ಲ. ವ್ಯಾಪಾರ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಕೆಲವರು ಕೋಳಿ ವ್ಯಾಪಾರ, ಮೊಟ್ಟೆ ವ್ಯಾಪಾರ, ಬಟ್ಟೆ ವ್ಯಾಪಾರ, ಇನ್ನೂ ಕೆಲವರು ವೋಟಿನ ವ್ಯಾಪಾರ. ಅವರು ಇದ್ದೇ ಇರುತ್ತಾರೆ ಅಂತವರ ಆಟ ನಡೆಯುವುದಿಲ್ಲ ಎಂದು ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿದರು.
ಸುಧಾಕರ್ ಹೇಳೀದ್ದೇನು?
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಉಪಚುನಾವಣೆ ನಿಮಿತ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಕ್ಷ ಸಂಘಟನೆ ಹಾಗೂ ಚುನಾವಣಾ ಪೂರ್ವ ಪ್ರಚಾರದ ತಯಾರಿಗಳನ್ನು ನಡೆಸಿದ್ದಾರೆ. ಹೀಗಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಸುಧಾಕರ್, ರಮೇಶ್ ಕುಮಾರ್ ಕ್ಷೇತ್ರಕ್ಕೆ ಬಂದಿರೋದು ಸ್ವಾಗತ. ಆದರೆ ಕ್ಷೇತ್ರದ ಜನತೆಗೆ 1978 ರಿಂದ ಶಾಸಕರಾಗಿರುವ ರಮೇಶ್ ಕುಮಾರ್ ಕಳೆದ ಬಾರಿ ಆರೋಗ್ಯ ಸಚಿವರಾಗಿದ್ದ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಲಿ. ರಮೇಶ್ ಕುಮಾರ್ ರವರ ನೀಡಿರುವ ಕಾನೂನು ಬಾಹಿರ ತೀರ್ಪು ಸುಪ್ರೀಂಕೋರ್ಟ್ ನಲ್ಲಿ ರದ್ದಾಗುತ್ತೆ. ತದನಂತರ ರಮೇಶ್ ಕುಮಾರ್ ಬಗ್ಗೆ ಮಾತನಾಡ್ತೇನೆ ಎಂದು ಹೇಳಿದ್ದರು.