ಚಿಕ್ಕಬಳ್ಳಾಪುರ: ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣ ಕೆಲವು ತಿಂಗಳಿಂದ ಬಾಕಿ ಇದ್ದು, ಸರ್ಕಾರ ಹಣ ಕೊಡುವುದಾದರೆ ತಿಂಗಳಿಗೊಮ್ಮೆ ಸರಿಯಾಗಿ ಕೊಡಲಿ ಎಂದು ಚಿಕ್ಕಬಳ್ಳಾಪುರದಲ್ಲಿ (Chikkaballapura) ಮಹಿಳೆಯರು ಆಗ್ರಹಿಸಿದ್ದಾರೆ.
ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಮಹಿಳೆಯರು, ಸರ್ಕಾರ ಐದಾರು ತಿಂಗಳು ಗೃಹಲಕ್ಷ್ಮಿ ಹಣವನ್ನು ಬಾಕಿ ಉಳಿಸಿಕೊಳ್ಳುವುದು ಬೇಡ. ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು. ಬಜೆಟ್‍ನಲ್ಲಿ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಹಣ ಬಿಡುಗಡೆಗೆ ತಿಂಗಳಲ್ಲಿ ಒಂದು ದಿನ ನಿಗದಿ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂರಿಗೆ ಮೀಸಲಾತಿ ವಿಚಾರ – ಪಾಕ್ ಅಪ್ಪಂದಿರಿಗೆ ಹುಟ್ಟಿರೋರು ಮಾತ್ರ ಇದನ್ನು ಯೋಚಿಸುತ್ತಾರೆ: ಸಿ.ಟಿ.ರವಿ
ಇತ್ತೀಚೆಗೆ ವಿಧಾನಸೌಧದಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ವಿಚಾರವಾಗಿ ಮಾತಾಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ನಾವು ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಫಿಲ್ಟರ್ ಮಾಡುತ್ತಿಲ್ಲ. ಎಲ್ಲರಿಗೂ ಹಣ ಸಿಗುತ್ತದೆ. ಯಾವುದೇ ಗೊಂದಲ ಬೇಡ, ಐದು ವರ್ಷ ಮಾತಿನಂತೆ ನಡೆಯುತ್ತೇವೆ. ಗೃಹಲಕ್ಷ್ಮಿ ನಗದು ಹಾಕುವುದು ಸಲ್ಪ ವಿಳಂಬವಾಗಿತ್ತು, ಇದೀಗ ಎಲ್ಲಾ ಸರಿಯಾಗಿದೆ. ಸ್ವಲ್ಪ ದಿನದಲ್ಲೇ ಎರಡು ತಿಂಗಳ ಕಂತು ಬಿಡುಗಡೆಯಾಗುತ್ತದೆ ಎಂದಿದ್ದರು.
ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿರುವುದಕ್ಕೆ ಬಿಜೆಪಿ ನಾಯಕರು ಸಹ ಟೀಕಿಸಿದ್ದರು. ಚುನಾವಣೆಗಾಗಿ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಲಾಗಿತ್ತು ಎಂದು ಆಕ್ರೋಶ ಹೊರಹಾಕಿದ್ದರು. ಇನ್ನೂ ಪತ್ರಕರ್ತರು ಸಹ ಹಣ ವಿಳಂಬದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರಶ್ನಿಸಿದಾಗ, ನಿಮಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗುತ್ತಾ ಎಂದು ವಾದಿಸಿದ್ದರು. ಇದೆಲ್ಲದರ ನಡುವೆ ಹಣ ಸಿಗದೆ ಬೇಸತ್ತ ಫಲಾನುಭವಿಗಳು ಬಜೆಟ್ ದಿನ, ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವ ದಿನಾಂಕವನ್ನು ಸಿಎಂ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ನಾನು ಪಾಕಿಸ್ತಾನದ ಮುಸ್ಲಿಂ, ಭಾರತದಲ್ಲಿ ಹಿಂಸೆಯಾಗುವ ಸಾಧ್ಯತೆ ಹೆಚ್ಚು: ಮುಂಬೈ ದಾಳಿ ಆರೋಪಿ ತಹವ್ವೂರ್