ಚಿಕ್ಕಬಳ್ಳಾಪುರ: ಅನುಮತಿಯಿಲ್ಲದೆ ಮೆರವಣಿಗೆ ಮಾಡಿ ರಸ್ತೆಯನ್ನು ತಡೆದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ ಓರ್ವ ಯುವಕ ಮೃತ ಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿ ನಡೆದಿದೆ.
ವಿನಯ್(27) ಪೊಲೀಸ್ ಲಾಠಿ ಏಟಿಗೆ ಬಲಿಯಾದ ಯುವಕ. ಈತ ಜಿಲ್ಲೆಯ ಕಾಂಗ್ರೆಸ್ ಮುಖಂಡ ನವೀನ್ ಕಿರಣ್ ಬೆಂಬಲಿಗ ಎನ್ನಲಾಗಿದೆ.
ಇಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಕೆಪಿಸಿಸಿ ವತಿಯಿಂದ ಚುನಾವಣಾ ವೀಕ್ಷಕರು ಆಗಮಿಸಿದ್ದರು. ಹೀಗಾಗಿ ನವೀನ್ ಕಿರಣ್ ತಮ್ಮ ಬೆಂಬಲಿಗರ ಜೊತೆ ಕೆಪಿಸಿಸಿ ಚುನಾವಣಾ ವೀಕ್ಷಕರ ಎದುರು ಶಕ್ತಿ ಪ್ರದರ್ಶನ ನಡೆಸಿದ್ದರು. ಆದರೆ ಕೇವಲ ಹಾಲಿ ಶಾಸಕ ಸುಧಾಕರ್ ಬೆಂಬಲಿಗರನ್ನು ಮಾತ್ರ ಚುನಾವಣಾ ವೀಕ್ಷಕರ ಬಳಿ ಬಿಟ್ಟ ಪೊಲೀಸರು ನವೀನ್ ಕಿರಣ್ ಬೆಂಬಲಿಗರಿಗೆ ಅವಕಾಶ ಕೊಡಲಿಲ್ಲ. ಇದರಿಂದ ನಗರದ ಸಿದ್ದೇಶ್ವರ ಸರ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಚುನಾವಣಾ ವೀಕ್ಷಕರು ವಾಪಾಸ್ಸಾದ ಬೆನ್ನಲ್ಲೇ ನವೀನ್ ಕಿರಣ್ ಬೆಂಬಲಿಗರು ಎಂಜಿ ರಸ್ತೆ ಮೂಲಕ ಮೆರವಣಿಗೆ ನಡೆಸಿದರು. ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಪೊಲೀಸರಿಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದರು.
ಈ ವೇಳೆ ನಗರದ ಪ್ರಮುಖ ರಸ್ತೆಯಾಗಿರುವ ಎಂಜಿ ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಮೆರವಣಿಗೆ ನಡೆಸಿದವರನ್ನು ಚದುರಿಸಲು ಪೊಲೀಸರು ಹಿಗ್ಗಾ ಮುಗ್ಗಾ ಲಾಠಿ ಬೀಸಿದ್ದಾರೆ. ಡಿವೈಎಸ್ಪಿ ಪ್ರಭುಶಂಕರ್ ನೇತೃತ್ವದಲ್ಲಿ ಲಾಠಿ ಪ್ರಹಾರ ನಡೆಸಲಾಗಿತ್ತು. ಈ ವೇಳೆ ವಿನಯ್ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ವಿನಯ್ ಮೃತಪಟ್ಟಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಿನಯ್ ಸಾವಿನ ಹಿನ್ನೆಲೆ ಪ್ರತಿಭಟನಕಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.