Connect with us

Chikkaballapur

ಅತಿಯಾದ ಚಳಿಗೆ ತತ್ತರಿಸಿದ ಮಗು ಸಾವು – ಕರ್ನಾಟಕದ ಸೋಮಾಲಿಯಾವಾದ ನಿರಾಶ್ರಿತರ ಕೇಂದ್ರ

Published

on

ಚಿಕ್ಕಬಳ್ಳಾಪುರ: ಭೀಕರ ಬರಗಾಲಕ್ಕೆ ಸೋಮಾಲಿಯಾ ದೇಶದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡ ವರದಿ ಇಡೀ ಜಗತ್ತನೇ ನಡುಗಿಸಿತ್ತು. ಆದರೆ ಸೋಮಾಲಿಯಾ ದೇಶದ ರೂಪದಲ್ಲೆ ಜಿಲ್ಲೆಯಲ್ಲಿರುವ ನಿರಾಶ್ರಿತರ ಕೇಂದ್ರ ರೂಪುಗೊಂಡಿದ್ದು, ಹಾಲುಗಲ್ಲದ ಕಂದಮ್ಮಗಳ ಹಾಗೂ ವಯೋವೃದ್ಧರ ಸಾವಿನ ಕೇಂದ್ರವಾಗಿ ಮಾರ್ಪಡಾಗಿದೆ.

ಕಳೆದ ಒಂದು ವಾರದಿಂದ ತೀವ್ರ ಚಳಿಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಕಂದವಾರ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ. ಅಲ್ಲದೇ ನಿರಾಶ್ರಿತರ ಕೇಂದ್ರದಲ್ಲಿ ಋತುಮಾನಕ್ಕೆ ತಕ್ಕಂತೆ ಮಕ್ಕಳ ಸಾವು ಸಂಭವಿಸುತ್ತಿದೆ. ಇದಕ್ಕೆಲ್ಲಾ ಕಾರಣ ನಿರಾಶ್ರಿತ ಕೇಂದ್ರದಲ್ಲಿ ವಾಸಿಸುತ್ತಿರುವ ಹಲವು ಕುಟುಂಬಗಳಿಗೆ ಕನಿಷ್ಟ ಬದುಕಲು ಬೇಕಾದ ಸಣ್ಣ ಮನೆಯೂ ಇಲ್ಲ.

ನಿರಾಶ್ರಿತ ಕೇಂದ್ರದಲ್ಲಿ ವಾಸಿಸುತ್ತಿರುವ ಸಯ್ಯದಾನಿ ಬಿ ಹಾಗೂ ಖಾದರ್ ಪಾಷಾ ದಂಪತಿಯ ಒಂದು ವರ್ಷದ ಮಗು ಬಾನು ಮೃತ ಮಗುವಾಗಿದ್ದು. ಅತಿಯಾದ ಚಳಿಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ. ಕಳೆದ ಒಂದು ವಾರದಿಂದ ನೆಗೆಡಿ, ಕೆಮ್ಮ ಶೀತದಿಂದ ಬಳಲುತ್ತಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಾಗ ಮಾತ್ರ ಗುಣಮುಖವಾಗುತ್ತಿತ್ತು. ಆದರೆ ವಾತಾವರಣದಲ್ಲಿ ಉಂಟಾದ ಬದಲಾವಣೆಗೆ ಸೂಕ್ತ ರಕ್ಷಣೆ ಇಲ್ಲದೇ ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗಿ ಮಗು ಮೃತಪಟ್ಟಿದೆ.

ನಿರಾಶ್ರಿತ ಕೇಂದ್ರದ ಹಿನ್ನೆಲೆ: ಚಿಕ್ಕಬಳ್ಳಾಪುರ ನಗರದ ಬಸಪ್ಪನ ಛತ್ರದಲ್ಲಿ ವಾಸವಾಗಿದ್ದ 60 ಕ್ಕೂ ಹೆಚ್ಚು ಕುಟುಂಬಗಳನ್ನು ಅಭಿವೃದ್ಧಿಯ ನೆಪದಲ್ಲಿ ಓಕ್ಕಲೆಬ್ಬಿಸಿದ ಜಿಲ್ಲಾಡಳಿತ ಕಂದವಾರ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಈ ಕುಟುಂಬಗಳಿಗೆ ಕಳೆದ 8 ವರ್ಷಗಳ ಹಿಂದೆ ಪುರ್ನವಸತಿ ಕಲ್ಪಿಸಿತ್ತು.

ಆದರೆ ಅಂದಿನಿಂದ ಇಂದಿನವರೆಗೂ ಅದೇ ಕಬ್ಬಿಣದ ತಗಡಿನ ಮನೆಗಳಲ್ಲೇ ವಾಸ ಮಾಡುತ್ತಿರುವ ಬಡಪಾಯಿ ಜೀವಗಳು ವರ್ಷವೀಡಿ ಒಂದಲ್ಲ ಒಂದು ಸಮಸ್ಯೆಯಿಂದ ನರಳಾಡುತ್ತಾ ಜೀವನ ಸಾಗಿಸುವಂತಾಗಿದೆ. ಚಳಿಗಾಲದಲ್ಲಿ ಅತಿಯಾದ ಚಳಿಗೆ ತತ್ತರಿಸಿ ಹೋದರೆ. ಬೇಸಿಗೆಯಲ್ಲಿ ರಣ ಬಿಸಿಲಿಗೆ ಬೆಂದು ಹೋಗುತ್ತಾರೆ. ಇನ್ನೂ ಮಳೆಗಾಲದಲ್ಲಂತೂ ಮಳೆಯ ಅಬ್ಬರಕ್ಕೂ ನಲುಗಿ ಹೋಗುತ್ತಾರೆ ಇಲ್ಲಿನ ನಿರಾಶ್ರಿತರು.

ಹೀಗಾಗಿ ಪ್ರತಿ ವರ್ಷವೂ ಪುರ್ನವಸತಿ ನಿರಾಶ್ರಿತರ ತಾಣದಲ್ಲಿ ಒಬ್ಬರು, ಇಬ್ಬರು ಹಾಲುಗಲ್ಲದ ಹಸುಗೂಸು ಕಂದಮ್ಮಗಳು ಹಾಗೂ ವಯೋವೃದ್ಧರು ಸಾವನ್ನಪ್ಪುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಬಡಜನರನ್ನು ಓಕ್ಕಲೆಬ್ಬಿಸಿದ ಜಿಲ್ಲಾಡಳಿತ ಕೊಟ್ಟ ಭರವಸೆಯನ್ನು ಮರೆತಿದೆ. ಇನ್ನು ಚುನಾವಣೆಯ ವೇಳೆಯಲ್ಲಿ ಮತ ಪಡೆಯಲು ಮಾತ್ರ ಆಗಮಿಸುವ ರಾಜಕೀಯ ನಾಯಕರು ಇವರನ್ನು ಮರೆತ್ತಿದ್ದಾರೆ.

ಕಂದವಾರ ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುತ್ತಿರುವ ಕುಟುಂಬಗಳು ವೃತ್ತಿಯಲ್ಲಿ ಚಿಂದಿ ಆಯುವ ಕಾರ್ಯದಲ್ಲಿ ತೊಡಗಿದ್ದು, ಬಂದ ಹಣದಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಇಂತಹ ನಿರಾಶ್ರಿತರ ಬದುಕಿಗೆ ಬೆಳಕು ಮೂಡಿಸಬೇಕಾದ ಅಧಿಕಾರಿಗಳು ಸದ್ಯ ನಿವೇಶನಗಳನ್ನ ಮಂಜೂರು ಮಾಡಲು 8 ವರ್ಷ ಕಾಲ ಕಳೆದಿದ್ದಾರೆ. ಇನ್ನೂ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಡೋಕೆ ಅದೆಷ್ಟು ವರ್ಷಗವಾಗುತ್ತದೆ ಎಂಬ ಪ್ರಶ್ನೆ ಮೂಡಿದೆ.

https://www.youtube.com/watch?v=KQ53Kj-_LwQ

Click to comment

Leave a Reply

Your email address will not be published. Required fields are marked *