ಚಿಕ್ಕಬಳ್ಳಾಪುರ: ಮನೆಯಲ್ಲೇ ಇದ್ದ ನಗರದ 65 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಡಿದ್ದು, ಇದು ಚಿಕ್ಕಬಳ್ಳಾಪುರ ನಗರದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಇದುವೆರಗೂ ಜಿಲ್ಲೆಯಲ್ಲಿ 12 ಕೊರೊನಾ ಸೋಂಕಿತ ಪ್ರಕರಣಗಳು ಗೌರಿಬಿದನೂರಿನಲ್ಲೇ ಪತ್ತೆಯಾಗಿದ್ದವು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಜನ ನೆಮ್ಮದಿಯಿಂದ ಇದ್ದರು. ಆದರೆ ಇಂದು ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಸ್ಟೀಲ್ ಪಾತ್ರೆಗಳ ವ್ಯಾಪಾರಿಯಾದ ವೃದ್ಧನಿಗೆ ಸೋಂಕು ಹೇಗೆ ತಗುಲಿತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
Advertisement
Advertisement
ಸದ್ಯ ವೃದ್ಧನ ಪತ್ನಿ(52), ಮೊದಲ ಮಗ(38), ಎರಡನೇ ಮಗ(26) ಹಾಗೂ ಮೂರನೇ ಮಗ(24) ಸೇರಿದಂತೆ ಮನೆ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮೊದಲೇ ಅಸ್ತಮಾ, ಬಿಪಿ ಹಾಗೂ ಸಕ್ಕರೆ ಖಾಯಿಲೆಯಿಂದ ವೃದ್ಧ ಬಳಲುತ್ತಿದ್ದರು ಈ ಮಧ್ಯೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ.
Advertisement
Advertisement
ಮೊದಲೇ ಗೌರಿಬಿದನೂರಿನ 12 ಪ್ರಕರಣಗಳಿಂದ ರೆಡ್ ಝೋನ್ ಪಟ್ಟಿಗೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆ ಈಗ ಮತ್ತಷ್ಟು ಕೊರೊನಾ ಸೋಂಕಿತ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ಸದ್ಯ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಯಲ್ಲಿ ವೃದ್ಧನ 06 ಮಂದಿ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿ ನಿಗಾ ಇಡಲಾಗಿದೆ. ಆದರೆ ವೃದ್ಧನಿಗೆ ಸೋಂಕು ತಗುಲಿದ್ದು ಹೇಗೆ ಅನ್ನೋದು ಜಿಲ್ಲಾಡಳಿತಕ್ಕೂ ತಲೆನೋವು ತಂದಿದೆ. ಆಸಲಿಗೆ ಈ ವೃದ್ಧ ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ, ಸೋಂಕಿತ ಪ್ರದೇಶಗಳಿಗೂ ಭೇಟಿ ಮಾಡಿಲ್ಲ. ಹೀಗಾಗಿ ಹೇಗೆ ಸೋಂಕು ತಗುಲಿತು ಅನ್ನೋದು ಮತ್ತಷ್ಟು ಆತಂಕ ಹೆಚ್ಚಿಸಿದೆ.