– ಭಾರೀ ಮಳೆಯಿಂದಾಗಿ ನಂದಿ ಗಿರಿಧಾಮದದ ಬಳಿ ಭೂಕುಸಿತ
ಚಿಕ್ಕಬಳ್ಳಾಪುರ: ಮಂಗಳವಾರ ರಾತ್ರಿ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ನಂದಿ ಗಿರಿಧಾಮದ ಬಳಿ ಭೂಕುಸಿತ ಉಂಟಾಗಿ ನಂದಿಗಿರಿಧಾಮಕ್ಕೆ ಸಾಗುವ ರಸ್ತೆಗೆ ಒಂದು ಸ್ಥಳದಲ್ಲಿ ಹಾನಿಯಾಗಿದ್ದು, ಶಾಶ್ವತವಾಗಿ ರಸ್ತೆ ಪುನರ್ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.
Advertisement
ನಂದಿ ಗಿರಿಧಾಮದಲ್ಲಿ ಭೂಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಹೆಚ್ಚಿನ ಪ್ರಮಾಣದಲ್ಲಿ ನಿನ್ನೆ ರಾತ್ರಿ ಮಳೆ ಸುರಿದ ಪರಿಣಾಮ ಬೆಟ್ಟದ ಮೇಲಿನಿಂದ ನೀರು ಒಂದೇ ಭಾಗದಲ್ಲಿ ಇಳಿಜಾರಾಗಿ ನಿರಂತರವಾಗಿ ಹರಿಯುವ ವೇಳೆ ಒಂದೇ ಕಡೆ ನೀರು ಸಂಗ್ರಹಗೊಂಡಿದೆ. ಪರಿಣಾಮ ಅಲ್ಲಿದ್ದ ಮಣ್ಣು ಹಾಗೂ ಚಿಕ್ಕ ಗುಡ್ಡ ಇಳಿಮುಖವಾಗಿ ಕುಸಿದ ರಭಸ ಹಾಗೂ ಒತ್ತಡಕ್ಕೆ ನಂದಿಗಿರಿಧಾಮಕ್ಕೆ ಸಾಗುವ ರಸ್ತೆಗೆ ಒಂದು ಕಡೆ ಹಾನಿಯುಂಟಾಗಿದೆ. ಅಲ್ಲಿದ್ದ ಮರಗಿಡಗಳು ನಾಶವಾಗಿವೆ. ಭೂ ಕುಸಿತವಾದ ಕಾರಣ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದರು.
Advertisement
Advertisement
ಇಂದೇ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಿ ಬೆಟ್ಟದ ಮೇಲಿರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗುತ್ತಿದೆ. ಮತ್ತೆ ಭೂ ಕುಸಿತ ಉಂಟಾಗದಂತೆ ತಡೆಗೋಡೆ ನಿರ್ಮಾಣ, ನೀರು ಹರಿಯಲು ವ್ಯವಸ್ಥೆ ಹಾಗೂ ಕಲ್ವರ್ಟ್ ನ್ನು ಮುಂದಿನ 15-20 ದಿವಸಗಳ ಒಳಗಡೆ ನಿರ್ಮಿಸಿ ಶಾಶ್ವತವಾಗಿ ಸುರಕ್ಷಿತ ರಸ್ತೆಯನ್ನು ನಿರ್ಮಿಸಲಾಗುವುದು. ರಸ್ತೆ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯವರಿಗೆ ಈಗಾಗಲೇ ಸೂಚಿಸಿದ್ದೇನೆ. ಅವರೂ ಸಹ ಈಗಾಗಲೇ ಕೆಲಸವನ್ನು ಆರಂಭಿಸಿದ್ದಾರೆ. ತಡೆಗೋಡೆ ಹಾಗೂ ಶಾಶ್ವತವಾಗಿ ರಸ್ತೆ ನಿರ್ಮಾಣವಾಗುವವರೆಗೂ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ
Advertisement
ಜಿಲ್ಲೆಯಾದ್ಯಾಂತ ಹಲವಡೆ ಮಳೆ:
ಚಿಕ್ಕಬಳ್ಳಾಪುರ ನಗರದಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಡಿಸಿ ಭೇಟಿ ನೀಡಿದ್ರು. ಈ ಬಗ್ಗೆ ಮಾತನಾಡಿದ ಡಿಸಿ, ಚಿಕ್ಕಬಳ್ಳಾಪುರ ನಗರದ ಕೆಲ ವಾರ್ಡ್ ಗಳನ್ನು ಭೇಟಿ ಮಾಡಿದ್ದೇನೆ. 8 ಮತ್ತು 9ನೇ ವಾರ್ಡ್‍ನಲ್ಲಿ ಚರಂಡಿಗಳು ಚಿಕ್ಕದಿವೆ. ಮನೆಗಳು ಸಹ ತಗ್ಗು ಪ್ರದೇಶದಲ್ಲಿವೆ. ಆದ ಕಾರಣ ನೀರು ಮನೆಗಳಿಗೆ ನುಗ್ಗಿದೆ. 20ರಿಂದ 25 ಮನೆಗಳಿಗೆ ನೀರು ನುಗ್ಗಿದ್ದು, ಸದ್ಯಕ್ಕೆ ಅದನ್ನು ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶನಿ ಮಹಾತ್ಮ ದೇವಸ್ಥಾನದ ಬಳಿ ಕಟ್ಟೆ ಒಡೆದಿದೆ. ಆದ ಕಾರಣ ಆ ನೀರು ಬೇರೆ ಕಡೆಗೆ ನುಗ್ಗಿ ಸಮಸ್ಯೆಯಾಗುತ್ತಿದೆ. ಅದನ್ನು ಇಂದೇ ಸರಿಪಡಿಸಲು ಸೂಚನೆ ನೀಡಿದ್ದೇನೆ ಎಂದರು.
ಜಕ್ಕಲಮಡುಗು ತುಂಬಿರುವುದು ಖುಷಿಯ ವಿಚಾರ:
ಮೂರು ವರ್ಷದ ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ನಗರಗಳ ಕುಡಿಯುವ ನೀರಿನ ಮೂಲ. ಜಕ್ಕಲಮಡುಗು ಈ ಹಿಂದೆ ಜಲಾಶಯ ಬರಿದಾಗಿತ್ತು. ಕಳೆದ ವರ್ಷ ಮತ್ತು ಈ ವರ್ಷ ತುಂಬಿದೆ. ಹೀಗಾಗಿ ಒಂದು ವರ್ಷ ನೀರಿನ ಸಮಸ್ಯೆ ಇರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ.ಮಿಥುನ್ ಕುಮಾರ್, ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ಜಿಲ್ಲಾ ಅರಣ್ಯಾಧಿಕಾರಿ ಅರ್ಸಲನ್, ನಂದಿಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.