ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಎಕೆ 47 ರೈಫಲ್ ಗಳನ್ನು ಹಿಡಿದು ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಹಾಗೂ ಯುದ್ಧತಂತ್ರ ಪಡೆಯ ವಿಶೇಷ ಪೊಲೀಸ್ ತಂಡ ನಂದಿಗಿರಿಧಾಮದಲ್ಲಿ ತಾಲೀಮು ನಡೆಸಿದೆ.
ನಂದಿಗಿರಿಧಾಮದ ಚೆಕ್ ಪೋಸ್ಟ್ ಬಳಿ ಎಕೆ 47 ಹಾಗೂ ಇನ್ಪಾಸ್ ರೈಫಲ್ ಹಿಡಿದು 10 ಮಂದಿ ಪೊಲೀಸರ ತಂಡ ಕಾವಲು ನಡೆಸಿದ್ದು, ನಂದಿಗಿರಿಧಾಮಕ್ಕೆ ಬಂದು ಹೋಗುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇನ್ನೂ ನಂದಿಗಿರಿಧಾಮದ ಮೂಲೆ ಮೂಲೆಯಲ್ಲಿ ಅಲೆದಾಡುತ್ತಿರುವ ವಿಶೇಷ ಪೊಲೀಸ್ ಪಡೆ ಡಿ ಸ್ವಾಟ್ ತಂಡದ ಪೊಲೀಸರು ಪಹರೆ ನಡೆಸಿದ್ದಾರೆ.
ರಾಜ್ಯದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಅಲರ್ಟ್ ಆಗಿರುವ ರಾಜ್ಯ ಗೃಹ ಇಲಾಖೆಯಿಂದ, ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ಎಸ್‍ಪಿ ಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷ ಯುದ್ಧತಂತ್ರಪಡೆ ರಚಿಸಿ ಅಲರ್ಟ್ ಆಗಿರುವಂತೆ ಸೂಚಿಸಿತ್ತು. ಹೀಗಾಗಿ ಎಚ್ಚೆತ್ತಿರುವ ಚಿಕ್ಕಬಳ್ಳಾಪುರ ಎಸ್‍ಪಿ ಸಂತೋಷ್ ಬಾಬು ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಹಾಗೂ ಯುದ್ಧ ತಂತ್ರ ಪಡೆ ರಚಿಸಿದ್ದು, ಈ ತಂಡ ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವ ಕೆಲಸ ಮಾಡುತ್ತಿದೆ.
ಡಿ ಸ್ವಾಟ್ ತಂಡದಲ್ಲಿ ವಿಶೇಷ ತರಬೇತಿ ಪಡೆದ 10 ಮಂದಿ ಪೊಲೀಸರಿದ್ದು, ಉಗ್ರರ ದಾಳಿ, ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ನಕ್ಸಲ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಸಮೇತ ಸಜ್ಜಾಗಿ ನಿಲ್ಲುವ ಈ ಪಡೆ ಸಾರ್ವಜನಿಕರಲ್ಲಿ ಉಗ್ರರ ದಾಳಿಯ ವೇಳೆ ಮೂಡುವ ಭಯದ ವಾತಾವಾರಣವನ್ನು ಹೋಗಲಾಡಿಸಿ, ಪರಿಸ್ಥಿತಿಯನ್ನು ನಿಭಾಯಿಸಿ ಉಗ್ರರ ದಮನ ಮಾಡುವ ಕಾರ್ಯ ನಡೆಸಲಿದೆ. ಆದರೆ ಮತ್ತೊಂದೆಡೆ ನಂದಿಗಿರಿಧಾಮದಲ್ಲಿ ರೈಫಲ್ ಸಮೇತ ವಿಶೇಷ ಪೊಲೀಸ್ ಪಡೆ ಕಂಡ ಪ್ರವಾಸಿಗರು, ಪ್ರೇಮಿಗಳು ಅರೇ ಏನಾಯ್ತಪ್ಪ ಎಂದು ಬೆಚ್ಚಿಬಿದ್ದಿದ್ದಾರೆ.