– ಸಿದ್ದುಗೆ ಎಂಟಿಬಿ ಚಾಲೆಂಜ್
ಚಿಕ್ಕಬಳ್ಳಾಪುರ: ಪ್ರಧಾನಿ ಮೋದಿ ಅವರ ಮುಂದೆ ಯಾವುದೇ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ತಲೆ ಎತ್ತಲಾಗಲ್ಲ ಎಂದು ಅನರ್ಹ ಶಾಸಕ ಟಿಎಂಬಿ ನಾಗರಾಜ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ನನ್ನ ಕೆಲಸವನ್ನೇ ಕುಮಾರಸ್ವಾಮಿ ಮಾಡಿಕೊಡುತ್ತಿಲ್ಲ ಎಂದು ಸಿದ್ದರಾಮಯ್ಯ ನನಗೆ ಹೇಳಿದ್ದಾರೆ. ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಬರಲಿ ಇದು ಸತ್ಯವೋ ಸುಳ್ಳೋ ನಾನೇ ಹೇಳುತ್ತೇನೆ ಎಂದು ಚಾಲೆಂಜ್ ಮಾಡಿದರು.
ಸಿದ್ದರಾಮಯ್ಯ ಅವರ ಮಾತನ್ನೇ ಮೈತ್ರಿ ಸರ್ಕಾರ ಕೇಳಲಿಲ್ಲ ಎಂದರೆ ನಮ್ಮ ಮಾತು ಕೇಳುತ್ತಾರಾ. ಅದಕ್ಕೆ ನಾವು ರಾಜೀನಾಮೆ ಕೊಟ್ಟು ಬಂದಿದ್ದು. ಸಿದ್ದರಾಮಯ್ಯ ಹೀಗೆ ಹೇಳಿದರು ಎಂದು ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ ಸಿದ್ದರಾಮಯ್ಯ ಹೇಳ್ತಾರ? ನನ್ನ ಬಳಿಯೇ ಮೂರು ಬಾರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಕೊಟ್ಟಿದ್ದ ಒಂದು ವರ್ಗಾವಣೆ ಮಾಡಿಲ್ಲ. ನನ್ನ ಮಾತೆ ಕೇಳುತ್ತಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಈ ಮಾತು ಹೇಳಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಲಿ. ಇಲ್ಲ ಪ್ರಮಾಣ ಮಾಡಲಿ ಎಂದು ಎಂಟಿಬಿ ಚಾಲೆಂಜ್ ಹಾಕಿದ್ದಾರೆ.
ಮೈತ್ರಿ ಸರ್ಕಾರ ಆಡಳಿತ ವೈಫಲ್ಯದಿಂದ ನಾವು ರಾಜೀನಾಮೆ ನೀಡಿದ್ದೇವೆ. ನಾವು ಪಕ್ಷಬಿಟ್ಟ ಮೇಲೆ ಯಾವ ಪಕ್ಷಕ್ಕಾದರು ಹೋಗುತ್ತೇವೆ. ಅದು ನಮ್ಮ ಸ್ವಾತಂತ್ರ್ಯ ಅವರಿಗೆ ಕೇಳುವ ಹಕ್ಕಿಲ್ಲ. ಮೈತ್ರಿ ಸರ್ಕಾರದಲ್ಲಿ ನಮಗೆ ಅನುದಾನ ಕೊಡಿಸಲು ಇವರಿಂದ ಆಗಲಿಲ್ಲ. ಇಂತಹವರ ಆಡಳಿತದಂದಲೇ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿ ಕೂರಲು ಇವರಿಗೆ ಶಕ್ತಿಯಿಲ್ಲ. ನರೇಂದ್ರ ಮೋದಿ ನಾಯಕತ್ವದ ದೇಶದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ತಲೆ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅವರೆ ಕಾಂಗ್ರೆಸ್ ಪಕ್ಷವನ್ನು ಮುಗಿಸಿಬಿಟ್ಟಿದ್ದಾರೆ. ಕಾಂಗ್ರೆಸ್‌ಗೆ ನಾಯಕತ್ವವಿಲ್ಲ, ಕಾಂಗ್ರೆಸ್ ರಾಷ್ಟç ನಾಯಕರು ಯಾರು? ರಾಹುಲ್ ಗಾಂಧಿ ಬೇಡ ಎಂದು ರಾಜೀನಾಮೆ ನೀಡಿದ್ದಾರೆ. ಅವರ ತಾಯಿ ತಾತ್ಕಲಿಕವಾಗಿ ಅಧ್ಯಕ್ಷರಾಗಿದ್ದಾರೆ. ಸೋನಿಯಾ ಗಾಂಧಿಗೆ ಆರೋಗ್ಯ ಸರಿಯಿಲ್ಲ. ಕಾಂಗ್ರೆಸ್ ನಾಯಕರಲ್ಲೇ ಅಧ್ಯಕ್ಷ ಗಿರಿ, ಶಾಸಕಾಂಗ ನಾಯಕ ಸ್ಥಾನ ಬೇಕು ಎಂದು ಗಲಾಟೆಗಳು ಮಾಡಿಕೊಳ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಸುಭದ್ರ ಮತ್ತು ಸ್ಥಿರ ಸರ್ಕಾರ ಬಿಜೆಪಿ ಎಂದು ನಾನು ಸ್ವಷ್ಟವಾಗಿ ಹೇಳುತ್ತೇನೆ ಎಂದು ಬಿಜೆಪಿ ಪರ ಬ್ಯಾಟ್ ಬೀಸಿದರು.