ಚಿಕ್ಕಬಳ್ಳಾಪುರ: ಕೆಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರ (H.D Kumaraswamy) ಅಪ್ಪಟ ಅಭಿಮಾನಿ ಹಾಗೂ ಜೆಡಿಎಸ್ (JDS) ಮುಖಂಡನನ್ನು ರಸ್ತೆ ಮಧ್ಯದಲ್ಲೆ ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ (Chikkaballapur) ತಮ್ಮನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ.
ಹತ್ಯೆಗೊಳಗಾದ ವ್ಯಕ್ತಿಯನ್ನು ಗ್ರಾಮದ ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ (50) ಎಂದು ಗುರುತಿಸಲಾಗಿದೆ. ಎಂದಿನಂತೆ ವೆಂಕಟೇಶ್ ರಾತ್ರಿ 9 ಗಂಟೆ ಸುಮಾರಿಗೆ ತಮ್ಮನಾಯಕನಹಳ್ಳಿ ಗೇಟ್ ನಲ್ಲಿರುವ ಮೆಡಿಕಲ್ ಸ್ಟೋರ್‌ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಸಂಚು ರೂಪಿಸಿ, ಮನೆಯತ್ತ ಸ್ಕೂಟಿ ಮೂಲಕ ಹೊರಟಿದ್ದ ವೆಂಕಟೇಶ್ ಅವರಿಗೆ ಅಡ್ಡ ಬಂದು ಲಾಂಗ್‌ನಿಂದ ಬಲವಾಗಿ ಬೀಸಲಾಗಿದೆ. ಪರಿಣಾಮ ಎಡಗೈ ತೋಳಿನ ಭಾಗ ಕಟ್ ಆಗಿ, ಗಾಡಿ ಸಮೇತ ವೆಂಕಟೇಶ್ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಮನಸ್ಸೋ ಇಚ್ಛೆ ಮುಖಕ್ಕೆ ಲಾಂಗ್ ನಿಂದ ಕೊಚ್ಚಲಾಗಿದೆ. ಹೊಟ್ಟೆಯ ಭಾಗಕ್ಕೆ ಬಲವಾಗಿ ಬೀಸಲಾಗಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
Advertisement
ಹತ್ಯೆಯಾಗುವುದಕ್ಕೂ ಕೆಲವು ನಿಮಿಷಗಳ ಮುನ್ನ ವೆಂಕಟೇಶ್, ಮಗನಿಗೆ ಕರೆ ಮಾಡಿ ಮನೆಗೆ ಬರುತ್ತಿದ್ದು, ಮುದ್ದೆ ಮಾಡುವಂತೆ ತಿಳಿಸಿದ್ದರಂತೆ. ಆದರೆ ಅಷ್ಟರಲ್ಲೇ ದಾರಿ ಮಧ್ಯೆ ಕೊಚ್ಚಿ ಕೊಲೆ ಮಾಡಲಾಗಿದ್ದು, ದಾರಿ ಹೋಕರು ನೋಡಿ ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ.
Advertisement
Advertisement
ಹತ್ಯೆಯಾದವರ ಮಗ ಪೊಲೀಸರ ಬಳಿ, ತಮ್ಮ ತಂದೆ ತಮ್ಮೂರಿನ ರಸ್ತೆಯಲ್ಲಿರುವ ಬಾರ್ ಬಳಿ ಕೆಲವು ಅಕ್ಕ ಪಕ್ಕದ ಗ್ರಾಮದ ಯುವಕರು ಕುಡಿದು ಗಲಾಟೆ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಬೈದು ಬುದ್ದಿವಾದ ಹೇಳಿದ್ದರು. ಹಾಗಾಗಿ ಆ ಹುಡುಗರು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾನೆ.
Advertisement
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಸೇರಿದಂತೆ ಸೋಕೋ ತಂಡ ಪರಿಶೀಲನೆ ನಡೆಸಿದೆ.