ಚಿಕ್ಕಬಳ್ಳಾಪುರ: ಬರೋಬ್ಬರಿ 30 ವರ್ಷಗಳ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರೊಬ್ಬರು ಸಚಿವರಾಗಿ ದಾಖಲೆ ಬರೆದಿದ್ದಾರೆ. ಅತ್ತ ಸಚಿವರಾಗಿ ಡಾ. ಕೆ ಸುಧಾಕರ್ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಇತ್ತ ಅವರ ಕನಸಿನ ಎಚ್‍ಎನ್ ವ್ಯಾಲಿ ಯೋಜನೆ ಸಾಕಾರಗೊಂಡಿದ್ದು, ಚಿಕ್ಕಬಳ್ಳಾಪುರಕ್ಕೆ ಎಚ್‍ಎನ್ ವ್ಯಾಲಿ ನೀರು ಹರಿದುಬಂದಿದೆ.
ಸಾಕಷ್ಟು ರಾಜಕೀಯ ಏಳು ಬೀಳುಗಳ ನಡುವೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಸುಧಾಕರ್ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ಇಂದಿನಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಕೆರೆಗೆ ಎಚ್‍ಎನ್ ವ್ಯಾಲಿ ನೀರು ಹರಿದುಬರುತ್ತಿದೆ. ಸದ್ಯ ತಿರ್ನಹಳ್ಳಿ-ಮುದ್ದೇನಹಳ್ಳಿ ರಸ್ತೆಯ ಬಂಡಹಳ್ಳಿ ಕ್ರಾಸ್ ಬಳಿಯ ಡೆಲವರಿ ಛೇಂಬರ್ ಮೂಲಕ ನೀರು ಹರಿದು ಬರುತ್ತಿದ್ದು, ಎಚ್‍ಎನ್ ವ್ಯಾಲಿ ನೀರು ಕಂದವಾರ ಕೆರೆಯತ್ತ ಸಾಗಿದೆ.
Advertisement
Advertisement
ಸರಿ ಸುಮಾರು 900 ಕೋಟಿ ರೂಪಾಯಿ ವೆಚ್ಚದ ಎಚ್‍ಎನ್ ವ್ಯಾಲಿ ಯೋಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 65 ಕೆರೆಗಳಿಗೆ ನೀರು ತುಂಬುವ ಯೋಜನೆಯಾಗಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನ ಎರಡು ಹಂತದಲ್ಲಿ ಸಂಸ್ಕರಣೆ ಮಾಡಿ ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
Advertisement
Advertisement
ಮೊಟ್ಟ ಮೊದಲ ಬಾರಿಗೆ ಚಿಕ್ಕಬಳ್ಳಾಪುರದ ಕಂದವಾರ ಕೆರೆಗ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರೆ ಕೆರೆಗಳಿಗೆ ಎಚ್‍ಎನ್ ವ್ಯಾಲಿ ನೀರು ಹರಿಯಲಿದೆ. ಸದ್ಯ ಸಚಿವರಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ನೂತನ ಸಚಿವ ಸುಧಾಕರ್ ಅವರು ನೇರವಾಗಿ ಬಂಡಹಳ್ಳಿ ಕ್ರಾಸ್ ಬಳಿಯ ಡೆಲವರಿ ಛೇಂಬರ್ ಬಳಿ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಕೈ ಪಕ್ಷದಲ್ಲಿದ್ದ ಸುಧಾಕರ್ ಅವರು ಎಚ್‍ಎನ್ ವ್ಯಾಲಿ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದರು. ಆಗ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಈಗ ಬಿಜೆಪಿ ಸೇರಿ ನೂತನ ಸಚಿವರಾಗಿ ಸುಧಾಕರ್ ಪ್ರಮಾಣ ವಚನ ಸ್ವೀಕರಿಸಿದ ವೇಳೆಯೇ ಎಚ್‍ಎನ್ ವ್ಯಾಲಿ ಯೋಜನೆ ಸಾಕಾರಗೊಂಡಿದೆ.