ಚಿಕ್ಕಬಳ್ಳಾಪುರ: ನದಿ, ಕೊಳವೆಬಾವಿ ನೀರು ಇಲ್ಲದಿದ್ದರೇನು ನಾನು ಕೃಷಿ ಮಾಡೇ ಮಾಡುತ್ತೀನಿ ಎಂದು ಪಣ ತೊಟ್ಟ ರೈತರೊಬ್ಬರು ಮನೆಯಲ್ಲಿ ವೇಸ್ಟ್ ಆಗುವ ನೀರನ್ನೇ ಕೃಷಿಗೆ ಬಳಸಿ ಬೇಷ್ ಅನಿಸಿಕೊಂಡಿದ್ದಾರೆ.
ಹೌದು, ಒಂದು ಕಡೆ ಜಮೀನ ಬಳಿ ಯಾವುದೇ ನದಿ ನಾಲೆಗಳಿಲ್ಲ, ಮತ್ತೊಂದೆಡೆ ಸಾವಿರ ಅಡಿ ಬಗೆದರೂ ಭೂ ತಾಯಿಯ ಓಡಲಲ್ಲೂ ನೀರಿಲ್ಲ. ಕೊರೆದ ಕೊಳವೆಬಾವಿಯಲ್ಲಿ ನೀರು ಸಿಗಲ್ಲ, ಅಪ್ಪಿ ತಪ್ಪಿ ಸಿಕ್ಕರೂ ಯಾವಾಗ ನೀರು ನಿಂತು ಹೋಗುತ್ತೋ ಹೇಳೋಕಾಗಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲೂ ಚಿಕ್ಕಬಳ್ಳಾಪುರ ತಾಲೂಕು ಕುಪ್ಪಹಳ್ಳಿ ಗ್ರಾಮದ ರೈತ ಮುನಿಯಪ್ಪನ ಸ್ಮಾರ್ಟ್ ಐಡಿಯಾ ಮಾಡಿ ಕೃಷಿ ಮಾಡುತ್ತಿದ್ದಾರೆ.
Advertisement
Advertisement
ಮುನಿಯಪ್ಪನವರು ಸ್ಮಾರ್ಟ್ ಐಡಿಯಾ ಮಾಡಿ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆದು ವ್ಯರ್ಥವಾಗುವ ನೀರನ್ನೇ ಬಳಸಿ ರೇಷ್ಮೆ ಸೊಪ್ಪು ಬೆಳೆಯುತ್ತಿದ್ದಾರೆ. ಇವರು ತಮ್ಮ ಬಳಿ ಇರುವ 30 ಗುಂಟೆ ಮಳೆಯಾಧಾರಿತ ಕೃಷಿ ಭೂಮಿಯಲ್ಲಿ ಮರಕಡ್ಡಿ ಮೂಲಕ 330 ರೇಷ್ಮೇ ಸೊಪ್ಪಿನ ಮರಗಳನ್ನ ಬೆಳೆಸಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆದ ರೈತ ಮುನಿಯಪ್ಪ ಮರಕಡ್ಡಿ ಪದ್ಧತಿ ಮೂಲಕ ರೇಷ್ಮೆ ಸೊಪ್ಪು ಬೆಳೆಯೋ ಕಾಯಕ ಶುರುಮಾಡಿದರು. ಆದರೆ ನೀರೇ ಇಲ್ಲದ ಕೇವಲ ಮಳೆ ಆಧಾರಿತ ಭೂಮಿಯಲ್ಲಿ ಬೆಳೆ ಬೆಳೆಯೋದು ಹೇಗೆ ಎಂದು ರೈತ ಹಿಂಜರಿಯಲಿಲ್ಲ. ಮೊದ ಮೊದಲು ಟ್ಯಾಂಕರ್ ಮೂಲಕ ನೀರುಣಿಸೋ ಉಪಾಯ ಮಾಡಿ, ತದನಂತರ ಟ್ಯಾಂಕರ್ ನೀರು ಬಲು ದುಬಾರಿ ಅಗಿದ್ದೇ ತಡ ಕಸದಿಂದ ರಸ ಅನ್ನೋ ಹಾಗೆ ವೇಸ್ಟ್ ಪ್ಲಾಸ್ಟಿಕ್ ಬಾಟಲಿಗಳನ್ನ ಬಳಸಿಕೊಂಡು ರೇಷ್ಮೆ ಮರಗಳಿಗೆ ನೀರುಣಿಸೋ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಮುನಿಯಪ್ಪ ತಮ್ಮ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆದು, ಸ್ನಾನ ಮಾಡಿ ವ್ಯರ್ಥವಾಗುವ ಪೋಲಾಗುವ ನೀರನ್ನ ಒಂದು ಕಡೆ ಶೇಖರಣೆ ಮಾಡಿ ಆ ನೀರನ್ನೇ ರೇಷ್ಮೆ ಸೊಪ್ಪು ಬೆಳೆಯೋಕೆ ಬಳಸುತ್ತಿದ್ದಾರೆ. ಪ್ರತಿ ದಿನ ತಮ್ಮ ಟಿವಿಎಸ್ ಎಕ್ಸ್‍ಎಲ್ ಗಾಡಿ ಮೂಲಕ 20 ಲೀಟರ್ ಪ್ಲಾಸ್ಟಿಕ್ ಕ್ಯಾನಿನಲ್ಲಿ ನೀರು ತಂದು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬುತ್ತಾರೆ, ದಿನಕ್ಕೆ ಎರಡು ಬಾರಿ ಸರದಿಯಂತೆ ಎಲ್ಲಾ ಬಾಟಲಿಗಳಿಗೆ ನೀರು ತುಂಬಿ, ರೇಷ್ಮೆ ಸೊಪ್ಪು ಸೊಂಪಾಗಿ ಬೆಳೆದು ನಿಲ್ಲುವಂತೆ ಶ್ರಮವಹಿಸಿದ್ದಾರೆ. ರೈತ ಮುನಿಯಪ್ಪನ ಐಡಿಯಾ ಕಂಡ ಪಕ್ಕದ ತೋಟದ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೊಂಪಾಗಿ ಬೆಳೆದು ನಿಂತಿರೋ ರೇಷ್ಮೆ ಸೊಪ್ಪನ್ನ ಎರಡು-ಮೂರು ತಿಂಗಳಿಗೊಮ್ಮೆ ರೈತ ಮುನಿಯಪ್ಪ ಮಾರಾಟ ಮಾಡುತ್ತಿದ್ದು, ಪ್ರತಿ ಬಾರಿ 3 ರಿಂದ 4 ಸಾವಿರ ರೂಪಾಯಿ ಕೈಗೆ ಸಿಗುತ್ತಿದೆಯಂತೆ. ಹೀಗಾಗಿ ಸುಮ್ಮನೆ ಕೂರದೆ ಎಷ್ಟೇ ಕಷ್ಟ ಬಂದರೂ ಇಷ್ಟಪಟ್ಟು ವಿಭಿನ್ನ ಆಲೋಚನೆ ಮಾಡಿ ಕೆಲಸ ಮಾಡಿದರೇ ಪ್ರತಿಫಲ ಸಿಕ್ಕೆ ಸಿಗುತ್ತೆ ಎಂದು ಮುನಿಯಪ್ಪ ಹೇಳಿದ್ದಾರೆ.