ಚಿಕ್ಕಬಳ್ಳಾಪುರ: ಪತ್ರವೊಂದರಲ್ಲಿ ಕಾಗುಣಿತ ತಪ್ಪಾಗಿರೋದಕ್ಕೆ ತಹಶೀಲ್ದಾರ್‌ಗೆ (Tahsildar) ನೋಟಿಸ್ ನೀಡಿರುವ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪತ್ರದಲ್ಲಿ ಕನ್ನಡ ಪದಗಳು ತಪ್ಪಾಗಿದ್ದರೂ ಸಹಿ ಮಾಡಿರುವ ಚಿಂತಾಮಣಿ ತಹಶೀಲ್ದಾರ್ ಸುದರ್ಶನ್ ಅವರಿಗೆ ಚಿಕ್ಕಬಳ್ಳಾಪುರ ಡಿಸಿ ಪಿ.ಎನ್ ರವೀಂದ್ರ ಅವರು ನೋಟಿಸ್ ನೀಡಿದ್ದಾರೆ. ಅಲ್ಲದೇ ಒಂದು ವಾರದೊಳಗೆ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.
ತಾಲೂಕು ಕಚೇರಿ ಎದುರು ಧರಣಿ ಮಾಡಲು ಶಂಬೂಕ ಸಂಘರ್ಷ ಸಮಿತಿ ಅನುಮತಿ ಕೋರಿ ತಹಶೀಲ್ದಾರ್‌ಗೆ ಮನವಿ ಪತ್ರ ನೀಡಿತ್ತು. ಇದಕ್ಕೆ ತಹಶೀಲ್ದಾರ್ ಅವರು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿವಳಿಕೆ ಪತ್ರ ನೀಡಿದ್ದರು. ತಿಳಿವಳಿಕೆ ಪತ್ರದಲ್ಲಿ ಸರಳ ಕನ್ನಡ ಪದಗಳನ್ನ ತಪ್ಪಾಗಿ ನಮೂದು ಮಾಡಲಾಗಿತ್ತು. ಈ ಬಗ್ಗೆ ಶಂಬೂಕ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸೂರ್ಯಕಿರಣ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಸೂರ್ಯಕಿರಣ್ ಅವರು ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ತಹಶೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಿದ್ದಾರೆ.