ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್ ಅವರಿಗೆ ಪಿಸಿಬಿ ಅಧ್ಯಕ್ಷ ಸ್ಥಾನ ಕೈತಪ್ಪಿದೆ ಎನ್ನಲಾಗಿದ್ದು, ಈ ಕುರಿತು ಮಾಹಿತಿ ತಿಳಿಯುತ್ತಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಸುಧಾಕರ್ ಅವರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿಗಿರಿ ಸಿಕ್ಕಿರಲಿಲ್ಲ. ಆದರೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ಪಕ್ಷದ ಮುಖಂಡರು ಚರ್ಚಿಸಿದ್ದರು ಎನ್ನಲಾಗಿದೆ. ಆದರೆ ಬಂಡಾಯ ನಾಯಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಸುಧಾಕರ್ ಅವರಿಗೆ ನಿಗಮ ಮಂಡಳಿ ಸ್ಥಾನವೂ ಕೈ ತಪ್ಪಿದೆ ಎನ್ನಲಾಗುತ್ತಿದೆ. ಈ ಕುರಿತು ಮಾಹಿತಿ ಪಡೆದಿರುವ ಸುಧಾಕರ್ ಅವರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರ ಸುಧಾಕರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದು ನನ್ನ ಗಮನಕ್ಕೆ ಅಧಿಕೃತವಾಗಿ ಬಂದಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಮಾಧ್ಯಮ ವರದಿಗಳು ನಿಜ ಎನ್ನುವುದಾದರೆ ನಾನು ಹೈಕಮಾಂಡ್ ಹಾಗೂ ಪಕ್ಷದ ನಾಯಕರ ಬಳಿ ಮಾತನಾಡುತ್ತೇನೆ. ಆದರೆ ಮಾಹಿತಿ ಇಲ್ಲದೇ ನಾನು ಏನೆಂದು ಪ್ರತಿಕ್ರಿಯೆ ನೀಡಲಿ ಎಂದರು.
Advertisement
ಇದೇ ವೇಳೆ ತಾಂತ್ರಿಕ ಕಾರಣ ನೆಪ ಹೇಳಿ ನನ್ನ ಹೆಸರನ್ನು ಅಧ್ಯಕ್ಷ ಸ್ಥಾನದಿಂದ ತಪ್ಪಿಸಿದರೆ, ನನ್ನ ನಿರ್ಧಾರವನ್ನು ಮಾಡುತ್ತೇನೆ. ಆದರೆ ಏನು ಮಾಡುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಕ್ಷೇತ್ರದ ಮಾತದಾರರ ನಿರ್ಧಾರವೇ ಅಂತಿಮವಾಗಿದ್ದು, ಈ ಬಗ್ಗೆ ಉಸ್ತುವಾರಿ ವೇಣುಗೋಪಾಲ್ ಬಳಿ ಮಾತನಾಡಿದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಆದರೆ ನಮ್ಮ ಪಕ್ಷ ಸಿದ್ಧಾಂತವನ್ನು ನಂಬಿ ಬೆಳೆದು ಬಂದಿದೆ. ಅದರಿಂದ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Advertisement
ಈ ಹಿಂದೆಯೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವ ಎಲ್ಲ ಅರ್ಹತೆ ತಮಗಿದೆ ಎಂದು ಸ್ಪಷ್ಟಪಡಿಸಿದ್ದ ಸುಧಾಕರ್, ನಾನು ಮೆಡಿಕಲ್ ಡಾಕ್ಟರ್ ಆಗಿದ್ದರು ಫೊರೆನ್ಸಿಕ್, ಮೈಕ್ರೋ ಬಯಾಲಜಿ, ಪರಿಸರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ನಿರ್ವಹಣೆ ಮಾಡುವ ಎಲ್ಲ ಅರ್ಹತೆಗಳೂ ಇವೆ. ಹಸಿರು ನ್ಯಾಯಾಧೀಕರಣ ಮಾನದಂಡಗಳಲ್ಲಿ ತಿಳಿಸಿರುವ ಅರ್ಹತೆ ತಮಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಿರಿ ಕೊಟ್ಟಿರುವ ಬಗ್ಗೆ ಯಾರಿಗಾದರೂ ಆಕ್ಷೇಪ ಇದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv