ಚಿಕ್ಕಬಳ್ಳಾಪುರ: ಕೋಮು ಸಾಮರಸ್ಯ ಕದಡುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು. ಎನ್.ಆರ್.ಸಿ ಹಾಗೂ ಸಿಎಎ ವಿರುದ್ಧದ ಹೋರಾಟ ಧರ್ಮಾತೀತವಾಗಿದ್ದರೂ, ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿ ಸೋಮಶೇಖರ್ ರೆಡ್ಡಿ ಮಾತನಾಡಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
ಶಾಸಕ ಸೋಮಶೇಖರ್ ರೆಡ್ಡಿ ಅವರು ಕೋಮು ಸಾಮರಸ್ಯ ಕದಡುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಸಂವಿಧಾನ ಬಾಹಿರ, ಕಾನೂನು ಬಾಹಿರ ಕೃತ್ಯ. ಪೊಲೀಸರು ಈಗಾಗಲೇ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕಿತ್ತು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಸೋಮಶೇಖರ ರೆಡ್ಡಿ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ದೂರು ಸಲ್ಲಿಸಲಾಗಿದೆ.
ಇತ್ತ ತಮ್ಮ ಹೇಳಿಕೆ ಕುರಿತು ಟೀಕೆ ವ್ಯಕ್ತವಾಗುತ್ತಿದ್ದರೂ ಕೂಡ, ತಮ್ಮ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ನನ್ನ ಮಾತಿಗೆ ನಾನು ಈಗಲೂ ಬದ್ಧ. ದೇಶದ ಆಸ್ತಿಯನ್ನು ನಷ್ಟ ಮಾಡುತ್ತಿರುವ ಬಗ್ಗೆ ನಾನು ಮಾತನಾಡಿದ್ದೇನೆ ಅಷ್ಟೇ. ಯಾರೋ ಹೇಳಿದ ಮಾತು ಕೇಳಿ ಪ್ರತಿಭಟನೆ ನಡೆಸದಂತೆ ಹೇಳಿದ್ದೆ. ಎಲ್ಲರೂ ಪಟ್ಟಿಗೆ ಇರೋಣ, ಪ್ರತಿಭಟನೆ ಮಾತ್ರ ನಾನು ವಿರೋಧ ಮಾಡುತ್ತೇನೆ. ಅದರಲ್ಲೂ ಶಾಂತಿಯಿಂದ ಪ್ರತಿಭಟನೆ ನಡೆಸುವವರ ಪರ ನಾನು ಇದ್ದೇನೆ ಎಂದರು.