ಚಿಕ್ಕಬಳ್ಳಾಪುರ: ನಗರದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ವಿನಾಕಾರಣ ಅಡ್ಡಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಇಷ್ಟು ದಿನ ಬಾಯಿ ಮಾತಿನಲ್ಲಿ ಹೇಳಾಯ್ತು, ಲಾಠಿ ರುಚಿಯೂ ತೋರಿಸಾಯ್ತು ಆದರೂ ಜನ ಅನಾವಶ್ಯಕವಾಗಿ ಓಡಾಡುತ್ತಿರುವ ಕಾರಣ ಈ ಕ್ರಮವನ್ನು ಜಾರಿಗೆ ತರಲಾಗಿದೆ.
ಚಿಕ್ಕಬಳ್ಳಾಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆ ನಗರಸಭೆ ಅಧಿಕಾರಿಗಳು ನಗರದಲ್ಲಿ ದಂಡ ವಿಧಿಸುವ ಮೂಲಕ ಜನ ಹೊರಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ತಿದ್ದಾರೆ. ಶುಕ್ರವಾರ ಹಾಗೂ ಇಂದು ಸೇರಿ ಒಟ್ಟು ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಚಿಕ್ಕಬಳ್ಳಾಪುರ ನಗರದಲ್ಲಿ ವರದಿಯಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರ ನಗರವನ್ನ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.
Advertisement
Advertisement
ಆದರೆ ಲಾಕ್‍ಡೌನ್, ಸೀಲ್‍ಡೌನ್ ನಡುವೆಯೂ ಅನಾವಶ್ಯಕವಾಗಿ ರಸ್ತೆಗಿಳಿಯುವ ಸಾರ್ವಜನಿಕರಿಗೆ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಜನ ಸುಖಾಸುಮ್ಮನೆ ಅಡ್ಡಾಡಿದರೆ, ಮನೆಯಿಂದ ಹೊರಬಂದರೆ ಸಾಕು 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ನಗರಸಭೆ ಅಧಿಕಾರಿಗಳು ತಂಡ ಮಾಡಿಕೊಂಡು ನಗರದ ನಾನಾ ಕಡೆ ತೆರಳಿ, ಮನೆಯಿಂದ ಹೊರಬಂದು ಬೇಕಾಬಿಟ್ಟಿ ತಿರುಗುತ್ತಿರುವ ಮಂದಿಗೆ ದಂಡ ವಿಧಿಸೋ ಕೆಲಸ ಮಾಡ್ತಿದ್ದಾರೆ.
Advertisement
Advertisement
ಸದ್ಯ ಜಿಲ್ಲೆಯಲ್ಲಿ 20 ಮಂದಿ ಕೊರೊನಾ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದ 4 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೂವರೆಗೂ ಜಿಲ್ಲೆಯಲ್ಲಿ ಸರಿಸುಮಾರು 2000 ಮಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಇನ್ನೂ 400 ಮಂದಿಯ ವರದಿಯ ನೀರಿಕ್ಷೆಯಲ್ಲಿದ್ದೇವೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.