ಚಿಕ್ಕಬಳ್ಳಾಪುರ: ರಾಜ್ಯ ಉಪಚುನಾವಣಾ ಕದನದ ಮತದಾನ ಮುಗಿದಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಫಲಿತಾಂಶಕ್ಕೆ ಕೇವಲ ಒಂದೇ ದಿನ ಬಾಕಿ ಇದ್ದು, ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ ಮಹಿಳೆಯರ ಚಿತ್ತ ಮಾತ್ರ ಚಿನ್ನದತ್ತ ನೆಟ್ಟಿದೆ. ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದು, ಅದರಲ್ಲೂ ಚಿನ್ನದಂಗಡಿಗಳಲ್ಲಿ ಮಹಿಳೆಯರೇ ತುಂಬಿತುಳುಕುತ್ತಿದ್ದಾರೆ.
ಚುನಾವಣೆಗೂ ಮುನ್ನ ಖಾಲಿ ಖಾಲಿ ಹೊಡೆಯುತ್ತಿದ್ದ, ನಗರದ ಚಿನ್ನದಂಗಡಿಗಳಲ್ಲಿ ಚಿನ್ನಾಭರಣ ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೌದು, ಚುನಾವಣೆ ಬಂದಿದ್ದೇ ಕ್ಷೇತ್ರದಲ್ಲಿ ಕುರುಡು ಕಾಂಚಾಣದ ಅಬ್ಬರ ಬಲು ಜೋರಾಗಿಯೇ ಇತ್ತು. ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು, ಕಾಂಚಾಣವನ್ನು ಮತದಾನದ ಹಿಂದಿನ ದಿನ ರಾತ್ರೋ ರಾತ್ರಿ ಹಂಚಿದ್ದಾರೆ ಎಂಬ ಮಾಹಿತಿ ಇದೆ.
Advertisement
Advertisement
ಚುನಾವಣೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳಿಂದ ಹಣ ಪಡೆದ ಮಹಿಳೆಯರು ಎಲ್ಲಾ ಹಣವನ್ನು ಕೂಡಿಟ್ಟು, ಈಗ ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳನ್ನ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಇಷ್ಟು ದಿನ ನಿಧಾನವಾಗಿ ಸಾಗಿದ್ದ ವ್ಯಾಪಾರ ಈಗ ಬಲು ಜೋರಾಗಿದೆ ಎಂದು ಚಿನ್ನಾಭರಣ ವರ್ತಕರು ಹೇಳಿಕೆ ನೀಡಿದ್ದಾರೆ.
Advertisement
ಚಿಕ್ಕಬಳ್ಳಾಪುರ ಉಪಚುನಾವಣಾ ಅಖಾಡದಲ್ಲಿ ಹಿಂದೆಂದೂ ಹರಿಯದ ದೊಡ್ಡ ಪ್ರಮಾಣದ ಕೋಟ್ಯಾಂತರ ರೂಪಾಯಿ ನೀರಿನಂತೆ ಖರ್ಚಾಗಿದೆ. ಆದರೆ ಇದೆಲ್ಲವನ್ನೂ ಕಂಡು ಕಾಣದಂತೆ ಚುನಾವಣಾಧಿಕಾರಿಗಳು ಸುಮ್ಮನಾಗಿದ್ದರು. ಹೀಗಾಗಿ ಕೋಟ್ಯಾಂತರ ರೂಪಾಯಿ ಹಣ ಮತದಾರರ ಕೈ ಸೇರಿದ್ದು. ಈಗ ಆ ಹಣದಲ್ಲಿ ತಮಗೆ ಬೇಕಾದ ವಸ್ತುಗಳನ್ನ ಜನ ಕೊಂಡುಕೊಳ್ಳುತ್ತಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಕೋಟಿ ಕೋಟಿ ರೂ. ಖರ್ಚು ಮಾಡಿ ಮತದಾರರಿಗೆ ಹಣ ಹಂಚಿ ಮತದಾರರನ್ನೇ ಭ್ರಷ್ಟರನ್ನಾಗಿ ಅಭ್ಯರ್ಥಿಗಳು ಮಾಡಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಪ್ರಜ್ಞಾವಂತರು ಹೇಳಿದ್ದಾರೆ.
Advertisement