– ಕೇಂದ್ರ ಕೂಡಲೇ 10 ಸಾವಿರ ಕೋಟಿ ನೀಡಬೇಕು
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನೆರೆ ಪ್ರವಾಹ ಹಿನ್ನೆಲೆ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದು ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಹೇಳಿದ್ದಾರೆ.
ಇಂದು ನಗರದಲ್ಲಿ 73 ನೇ ಸ್ವಾತಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹವಿರುವ ಕಾರಣ ಸಿಎಂ ಯಡಿಯೂರಪ್ಪನವರಿಗೆ ಹೈಕಮಾಂಡ್ ಭೇಟಿ ಮಾಡಲು ಸಮಯ ಸಾಕಾಗಲಿಲ್ಲ. ಹೀಗಾಗಿ ಮಂತ್ರಿ ಮಂಡಲ ರಚನೆ ಮಾಡೋದು ವಿಳಂಬವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇದೇ ತಿಂಗಳು 18ನೇ ತಾರೀಖಿನ ನಂತರ ಮಂತ್ರಿ ಮಂಡಲ ವಿಸ್ತರಣೆ ಆಗಲಿದೆ. ರಾಜ್ಯದಲ್ಲಿ ಒಂದೆಡೆ ನರೆ ಇದೆ ಮತ್ತೊಂದೆಡೆ ಬರ ಇದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ಪರಿಹಾರ ಕೊಡಬೇಕು. 10 ಸಾವಿರ ಕೋಟಿ ಅಲ್ಲ. ಅದರ 4 ಪಟ್ಟು ಹಣ ನೀಡಿದರೂ ಸಾಕಾಗಲ್ಲ. ಮಳೆಯಿಂದ ರಾಜ್ಯದಲ್ಲಿ ದೊಡ್ಡ ಮಟ್ಟದ ಹಾನಿಯಾಗಿದೆ. ರಾಜ್ಯದಲ್ಲಿ ಬರಪೀಡಿತ ಜಿಲ್ಲೆಗಳಿಗೂ ಪರಿಹಾರ ಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಒಂದು ಕಡೆ ಜಲಪ್ರಳಯ ಮತ್ತೊಂದೆಡೆ ಭೀಕರ ಬರಗಾಲವಿದೆ. ಉತ್ತರ ಕರ್ನಾಟಕ, ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿ ಬರಗಾಲ ತಾಂಡವವಾಡ್ತಿದೆ. ಹೀಗಾಗಿ ಕೇಂದ್ರಸರ್ಕಾರ ಕೂಡಲೇ 10 ಸಾವಿರ ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ನೀಡಬೇಕು ಎಂದು ಸಂಸದ ಬಿ.ಎನ್ ಬಚ್ಚೇಗೌಡ ಆಗ್ರಹಿಸಿದರು.