ಚಿಕ್ಕಬಳ್ಳಾಪುರ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‍ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ, ಇಂದು ಕೆಐಎಎಲ್‍ಗೆ ಭೇಟಿ ನೀಡಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಜೊತೆಗೆ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವ ಸುಧಾಕರ್, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನ ತಪಾಸಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಂದಹಾಗೆ ಈಗಾಗಲೇ ಕೊರೊನಾ ವೈರಸ್ ಕಂಡು ಬಂದ ದಿನದಿಂದಲೂ ಕೆಐಎಎಲ್ ನಲ್ಲಿ ಪ್ರಯಾಣಿಕರ ಉಷ್ಣತಪಾಸಣೆ ನಡೆಸಲಾಗುತ್ತಿತ್ತು. ಆದರೂ ಕೂಡ ಸದ್ಯ ಕೊರೊನಾ ವೈರಸ್ ಚೀನಾದಿಂದ ಇತರೆ ಯೂರೋಪ್ ರಾಷ್ಟ್ರಗಳಿಗೂ ಹರಡಿರುವ ಹಿನ್ನೆಲೆ ಭಾರತ ಹಾಗೂ ರಾಜ್ಯಕ್ಕೂ ಹರಡದಂತೆ ಅತಿ ಹೆಚ್ಚಿನ ಕ್ರಮ ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಒಂದು ಅನುಮಾನಸ್ಪದ ಪ್ರಕರಣ ಪತ್ತೆಯಾಗಿತ್ತು. ಆದರೆ ಅದು ಸಹ ಈಗ ನೆಗೆಟಿವ್ ಬಂದಿದ್ದು, ಇದುವರೆಗೂ ಕೂಡ ಯಾರಿಗೂ ಕೊರೊನಾ ಸೋಂಕು ತಗುಲಿರುವುದಿಲ್ಲ ಅಂತ ಸ್ಪಷ್ಟಪಡಿಸಿದರು. ಈಗಾಗಲೇ ವಿಮಾನ ನಿಲ್ದಾಣದ ಮೂಲಕ ವಿದೇಶಿಗರು ಬರುವುದರಿಂದ ಅಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕಿದೆ ಎಂದರು.
ಇರಾನ್, ಇಟಲಿ, ದಕ್ಷಿಣ ಕೊರಿಯಾ, ಹಾಗೂ ಚೀನಾದಿಂದ ಬರುವ ಪ್ರಯಾಣಿಕರು ಹಾಗೂ ಪ್ರವಾಸ ತೆರಳಿ ವಾಪಸ್ ಆಗುತ್ತಿರುವ ಸ್ವದೇಶಿಗರ ಮೇಲೂ ಸಹ ಹೆಚ್ಚಿನ ಗಮನ ಕೊಡಬೇಕಿದೆ. ಅನುಮಾನಸ್ಪದ ವ್ಯಕ್ತಿಗಳು ಪತ್ತೆಯಾದಲ್ಲಿ ಅಂತಹ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ಕೊಡುವ ಕೆಲಸ ಮಾಡಲಿದ್ದೇವೆ. ಕೆಐಎಎಲ್‍ನಲ್ಲಿ ಪ್ರತ್ಯೇಕ ಚಿಕಿತ್ಸಾ ಕೇಂದ್ರ ಆರಂಭಿಸಬೇಕಿದ್ದು ಅದಕ್ಕಾಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಾಗಿ ತಿಳಿಸಿದರು.