ಚಿಕ್ಕಬಳ್ಳಾಪುರ: ಡ್ಯಾಂ ನಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದು ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಬಳಿಯ ದಂಡಿಗಾನಹಳ್ಳಿ ಡ್ಯಾಂನಲ್ಲಿ ನಡೆದಿದೆ.
23 ವರ್ಷದ ಅಭಿಲಾಷ್ ಹಾಗೂ ಸತೀಶ್ ಶಿವಕುಮಾರ್ ಮೃತರು. ಬೆಂಗಳೂರಿನ ಕೆ. ನಾರಾಯಣಪುರ ಬಳಿಯ ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಾದ ಇವರು ಕಾರಿನಲ್ಲಿ ಓರ್ವ ಯುವತಿ ಸೇರಿ ನಾಲ್ವರು ಯುವಕರು ದಂಡಿಗಾನಹಳ್ಳಿ ಡ್ಯಾಂಗೆ ಆಗಮಿಸಿದ್ದರು. ಘಟನೆಯಲ್ಲಿ ಕೆವಿನ್ ಮೆಂಡೋಸ್ ಹಾಗೂ ಬುವಾಜ್ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಇನ್ನೂ ಡ್ಯಾಂನ ಕೊನೆಯಲ್ಲಿ ಈಜಾಡುತ್ತಿದ್ದ ರಕ್ಷಿತಾ ಘಟನೆಯಿಂದ ಬೆಚ್ಚಿಬಿದ್ದು ನೀರಿನಿಂದ ಹೊರಬಂದಿದ್ದಾಳೆ. ನೀರಿನಲ್ಲಿ ಈಜಾಡುತ್ತಾ ಆಡವಾಡುತ್ತಿದ್ದ ನಾಲ್ವರು ಯುವಕರು ಡ್ಯಾಂನಲ್ಲಿ ಎಲ್ಲಿಂದಲೋ ತೇಲಿ ಬಂದ ಪ್ಲಾಸ್ಟಿಕ್ ಬಾಟಲಿಯನ್ನು ನಾನು ತರುತ್ತೇನೆ ಎಂದು ಚಾಲೆಂಜ್ ಹಾಕಿಕೊಂಡಿದ್ದಾರೆ. ಈ ವೇಳೆ ಡ್ಯಾಂ ಆಳ ಅರಿಯದ ಯುವಕರು ಪ್ಲಾಸ್ಟಿಕ್ ಬಾಟಲಿ ತರುವ ಭರದಲ್ಲಿ ಮೊದಲು ಸತೀಶ್ ಶಿವಕುಮಾರ್ ನೀರಿನಲ್ಲಿ ಮುಳುಗಿದ್ರೇ ಅವನನ್ನ ಹುಡುಕಿಕೊಂಡು ಹೋದ ಅಭಿಲಾಷ್ ಸಹ ನೀರಿನಲ್ಲಿ ಮುಳುಗಿದ್ದಾನೆ.
ಅಷ್ಟರಲ್ಲೇ ಸ್ಥಳದಲ್ಲಿದ್ದ ಸ್ಥಳೀಯರು ಉಳಿದ ಇಬ್ಬರು ಯುವಕರನ್ನು ದಡಕ್ಕೆ ಕರೆತಂದಿದ್ದಾರೆ. ಸದ್ಯ ಇಬ್ಬರು ಯುವಕರು ನೀರುಪಾಲಾಗಿದ್ದು ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಆಗ್ನಿಶಾಮಕ ದಳ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದು ನೀರಿನಲ್ಲಿ ಮುಳುಗಡೆ ಆಗಿರುವ ಇಬ್ಬರು ಯುವಕರ ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.