ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ನವಜೋಡಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಓಡಿ ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ಯುವಕ ಹಾಗೂ ಬೆಂಗಳೂರು ಮೂಲದ ಯುವತಿ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರ ವಿವಾಹಕ್ಕೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನೆ ಬಿಟ್ಟು ಹೋಗಿ ದಾವಣಗೆರೆಯಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಸಂಬಂಧ ಯುವತಿಯ ಸಂಬಂಧಿಕರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದು, ನವಜೋಡಿಗೆ ಪ್ರಾಣಭೀತಿ ಎದುರಾಗಿದೆ.
Advertisement
Advertisement
ಪೋಷಕರ ಭಯದಿಂದ ನವಜೋಡಿ ಚಿಕ್ಕಬಳ್ಳಾಪುರ ನಗರ ಮಹಿಳಾ ಪೊಲೀಸ್ ಠಾಣೆಗೆ ಬಂದು ರಕ್ಷಣೆಗೆ ಮೊರೆಯಿಟ್ಟಿದ್ದಾರೆ. ಇನ್ನೂ ಯುವತಿ ಕಾಣೆಯಾದ ಸಂಬಂಧ ಯುವತಿ ಕಡೆಯವರು ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತ ಯುವಕನ ಸಂಬಂಧಿಕರು ಸಹ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸ್ ಠಾಣೆಗೆ ಬಂದ ಯುವಕ ಯುವತಿಯನ್ನು ಶಿಡ್ಲಘಟ್ಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
Advertisement
ಯುವಕನ ಪೋಷಕರು ಮದುವೆಗೆ ಸಮ್ಮತಿಸಿ ಸೂಚಿಸಿದ್ದಾರೆ. ಆದರೆ ಯುವತಿ ಪೋಷಕರು ಮಾತ್ರ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಮಗೆ ರಕ್ಷಣೆ ಕೊಡುವಂತೆ ಪ್ರೇಮಿಗಳು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಯುವತಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಶ್ರೀಮಂತ ಮನೆತನ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಾಗಿದ್ದಾಳೆ. ಯುವಕ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.