ಚಿಕ್ಕಬಳ್ಳಾಪುರ: ಹಾಡಹಗಲೇ ಹಳೇ ಮನೆ ವಿವಾದದ ಜಗಳದ ವೇಳೆ ಯುವಕನೋರ್ವ ಲಾಂಗ್ ತೋರಿಸಿ ಯಾರ್ ಬರ್ತಿರೋ ಬರ್ರೋ ಕೊಚ್ಚಾಕಿ ಬಿಡ್ತೀನಿ ಅಂತ ಧಮ್ಕಿ ಹಾಕಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇದ್ಲೂಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನರಸಿಂಹಮೂರ್ತಿ ಎಂಬವರ ಪುತ್ರ ಪ್ರೇಮ್ ಕುಮಾರ್ ಎಂಬಾತ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ. ನಾಗೇಶ್ ಎಂಬವರಿಗೆ ಪ್ರಿತ್ರಾರ್ಜಿತವಾಗಿ ಬಂದಿದ್ದ ಖಾಲಿ ನಿವೇಶನ ಜಾಗದಲ್ಲಿ ಪ್ರೇಮ್ ಕುಮಾರ್ ತಂದೆ ನರಸಿಂಹಮೂರ್ತಿ ಒಪ್ಪಂದದ ಪ್ರಕಾರ ಹಲವು ವರ್ಷಗಳ ಹಿಂದೆ ಮನೆ ಕಟ್ಟಿಕೊಂಡಿದ್ದರು. ಈಗ ನಾಗೇಶ್ ಹೊಸ ಮನೆ ಕಟ್ಟಿಕೊಳ್ಳಲು ನಿರ್ಧಾರ ಮಾಡಿದ್ದು, ಸ್ಥಳ ಖಾಲಿ ಮಾಡುವಂತೆ ನರಸಿಂಹಮೂರ್ತಿ ಗೆ ತಾಕೀತು ಮಾಡಿದ್ದಾರೆ. ನಾಗೇಶ್ ಮತ್ತು ನರಸಿಂಹಮೂರ್ತಿ ಸಂಬಂಧಿಗಳಾಗಿದ್ದರಿಂದ ನಿಗದಿತ ಮೊತ್ತಕ್ಕೆ ಮನೆ ಖಾಲಿ ಮಾಡಲು ಒಪ್ಪಿಕೊಂಡಿದ್ದರು.
ಒಪ್ಪಂದದಂತೆ ನರಸಿಂಹಮೂರ್ತಿ ನಾಗೇಶ್ ಕಡೆಯಿಂದ 30,000 ರೂ. ಹಣ ಪಡೆದು ಮನೆ ಖಾಲಿ ಮಾಡಿದ್ದಾರೆ. ಹೀಗಾಗಿ ಹೊಸ ಮನೆ ಕಟ್ಟಲು ನಾಗೇಶ್ ಜೆಸಿಬಿ ಮೂಲಕ ಹಳೆ ಮನೆಯ ಕೆಡವಲು ಮುಂದಾದಾಗ ಮಧ್ಯಪ್ರವೇಶ ಮಾಡಿರುವ ನರಸಿಂಹಮೂರ್ತಿ ಮಗ ಪ್ರೇಮ್ ಕುಮಾರ್ ಮನೆ ಕೆಡವಲು ತಗಾದೆ ತೆಗೆದಿದ್ದಾನೆ. ಈ ವೇಳೆ ಲಾಂಗ್ ನಿಂದ ಕೊಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ಪ್ರೇಮ್ ಕುಮಾರ್ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನ ಪೊಲೀಸರು ಬಂಧಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಅಂತ ನಾಗೇಶ್ ಆರೋಪಿಸಿದ್ದಾರೆ.