– ಕಾರು ಬಿಟ್ಟು ಪರಾರಿಯಾದ ಖದೀಮರು
ಚಿಕ್ಕಬಳ್ಳಾಪುರ: ತಮಿಳುನಾಡು ನೊಂದಣಿಯ ಸ್ಕಾರ್ಪಿಯೋ ಕಾರಿಗೆ ಕರ್ನಾಟಕ ನಂಬರ್ ಪ್ಲೇಟ್ ಬಳಸಿ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸುತ್ತಿದ್ದ ಕಾರನ್ನು ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಂದಹಾಗೆ ಆಯಾ ರಾಜ್ಯಗಳಲ್ಲಿ ಆ ರಾಜ್ಯದ ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಕಾರನ್ನು ಬೆನ್ನಟ್ಟಿದ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಬಳಿ ಸ್ಕಾರ್ಪಿಯೋ ಕಾರನ್ನು ತಡೆದು ಕಾರು ಸಮೇತ ರಕ್ತ ಚಂದನ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಕಾರಿನಲ್ಲಿ 14 ರಕ್ತಚಂದನದ ತುಂಡುಗಳಿದ್ದು ಆರೋಪಿಗಳು ಅಧಿಕಾರಿಗಳನ್ನು ನೋಡುತ್ತಿದ್ದಂತೆ ಕಾರು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಕಾರಿನ ನಂಬರ್ ಟಿಎನ್ 49, ಎ.ಎಫ್ 0333 ಅಸಲಿ ಆಗಿದ್ದು, ಇದಕ್ಕೆ ಕೆಎ 34 ಎಂ 6866 ನಂಬರ್ ಪ್ಲೇಟನ್ನು ಅಳವಡಿಸಿದ್ದಾರೆ. ಕಾರಿನ ಪರಿಶೀಲನೆ ವೇಳೆ ಸರಿಸುಮಾರು 500 ಕೆಜಿಯ ಲಕ್ಷಾಂತರ ರೂಪಾಯಿ ಮೌಲ್ಯದ 14 ರಕ್ತ ಚಂದನದ ತುಂಡುಗಳು, ಎರಡು ಆಸಲಿ ತಮಿಳುನಾಡಿನ ನೊಂದಣಿಯ ನಂಬರ್ ಪ್ಲೇಟುಗಳು, ಕಾರಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.