ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್‍ಗೆ 65 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದು, ಇದೀಗ ವೃದ್ಧನ ಮಗ ಸೇರಿ 6 ಮಂದಿಗೆ ಕೋವಿಡ್-19 ನೆಗೆಟಿವ್ ಎಂದು ವರದಿ ಬಂದಿದೆ. ಉಳಿದ 6 ಮಂದಿಯ ವರದಿಯ ನೀರಿಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದ್ದಾರೆ.
ವೃದ್ಧನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಮಗನ ವರದಿ ನೆಗೆಟಿವ್ ಎಂದು ಬಂದಿದೆ. ಉಳಿದ 6 ಮಂದಿಯ ವರದಿ ನೆಗೆಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ದ್ವಿತೀಯ ಸಂಪರ್ಕಿತ 42 ಮಂದಿಗೂ ಕ್ವಾರಂಟೈನ್ ಮಾಡಿದ್ದೇವೆ. ವೃದ್ಧನಿಗೆ ಹೇಗೆ ಸೋಂಕು ತಗುಲಿದೆ ಎಂಬುದರ ತನಿಖೆ ಮಾಡ್ತಿದ್ದೇವೆ ಎಂದು ವರು ತಿಳಿಸಿದ್ದಾರೆ.
ಬುಧವಾರ ವೃದ್ಧ ಬಲಿಯಾದ ಪ್ರಕರಣವು ಕೊರೊನಾ ವೈರಸ್ ನಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿದ ಎರಡನೇ ಪ್ರಕರಣವಾಗಿದೆ. ಈ ಮೊದಲು ಗೌರಿಬಿದನೂರಿನ 70 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದರು. ವೃದ್ಧ ಮೊದಲೇ ಅಸ್ತಮಾ, ಬಿಪಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರವಷ್ಟೇ ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಸೋಂಕಿತ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ವೃದ್ಧ ವಿದೇಶಕ್ಕೆ ಹೋಗಿ ಬಂದ ಹಿನ್ನೆಲೆ ಹೊಂದಿಲ್ಲ. ಕೊರೊನಾ ಸೋಂಕಿತ ಪ್ರದೇಶಗಳಿಗೆ ಹೋಗಿ ಬಂದ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲ. ಆದರೂ ಇವರಿಗೆ ಕೊರೊನಾ ಹೇಗೆ ಬಂತು ಅನ್ನೋದು ಯಕ್ಷ ಪ್ರಶ್ನೆಯಾಗಿದೆ.