ಚಿಕ್ಕಬಳ್ಳಾಪುರ: ಜನವರಿ 20 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿಯೋರ್ವ ಆಯ್ಕೆಯಾಗಿದ್ದಾನೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಶ್ರೀ ಗಂಗಾದೇವಿ ಸರ್ಕಾರಿ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಧೀರಜ್ ಗೌಡ ಆಯ್ಕೆಯಾದ ವಿದ್ಯಾರ್ಥಿ. ಮೇಲೂರು ಗ್ರಾಮದ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿರುವ ಧೀರಜ್‍ಗೌಡ ದೆಹಲಿಯಲ್ಲಿ ಜನವರಿ 20 ರಂದು ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾನೆ.
ಇಷ್ಟು ದಿನ ಮಾಧ್ಯಮಗಳ ಮೂಲಕ ದೇಶದ ಪ್ರಧಾನಮಂತ್ರಿಗಳನ್ನ ನೋಡುತ್ತಿದ್ದ ನನಗೆ ಪ್ರತ್ಯಕ್ಷವಾಗಿ ಮೋದಿಯವರನ್ನ ನೋಡಲು ಅವಕಾಶ ಸಿಕ್ಕಿರೋದು ಖುಷಿಯ ವಿಚಾರ. ಹಾಗೆಯೇ ಸಂವಾದದಲ್ಲಿ ಪರೀಕ್ಷೆಯ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಮೋದಿಯವರಿಗೆ ಕೇಳಲು ಬಯಸಿದ್ದೇನೆ ಎಂದು ವಿದ್ಯಾರ್ಥಿ ಧೀರಜ್ ಗೌಡ ಹೇಳಿದ್ದಾನೆ.
ಧೀರಜ್ ಗೌಡ ಆಯ್ಕೆಯಾಗಿರುವುದಕ್ಕೆ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮೇಲೂರು ಗ್ರಾಮಸ್ಥರು ಶುಭಾಶಯಗಳನ್ನು ತಿಳಿಸಿದ್ದಾರೆ.