ತಾಯಿ ಸಾಕುವ ವಿಚಾರಕ್ಕೆ ಮಗ-ಮಗಳ ಕುಟುಂಬಸ್ಥರ ಮಧ್ಯೆ ಮಾರಾಮಾರಿ

Public TV
1 Min Read
Mother

– ಬೀದಿಗೆ ಬಿದ್ದ ತಾಯಿ, ಐವರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ಹೆತ್ತ ತಾಯಿಯನ್ನು ಸಾಕುವ ವಿಚಾರದಲ್ಲಿ ಮಗ ಹಾಗೂ ಮಗಳ ಕುಟುಂಬಸ್ಥರ ಮಧ್ಯೆ ಮಾರಾಮಾರಿ ನಡೆದ ದೇವನಹಳ್ಳಿ ತಾಲೂಕಿನ ದೊಡ್ಡ ಸಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೊಡ್ಡ ಸಾಗರಹಳ್ಳಿ ಗ್ರಾಮದ ಬಿಜುಮಾ ಎಂಬವರ ಮಗ ಇಮಾಂಸಾಬ್ ಹಾಗೂ ಮಗಳು ಜಂಗಮಾ ಕುಟುಂಬಸ್ಥರು ಮಧ್ಯೆ ಗಲಾಟೆಯಾಗಿದೆ. ವಯಸ್ಸಾಗಿದ್ದ ತಾಯಿ ಬಿಜುಮಾ ಕಳೆದ 15 ವರ್ಷಗಳಿಂದ ಮಗಳ ಜೊತೆಗೆ ವಾಸವಾಗಿದ್ದಾರೆ. ಆದರೆ ಇತ್ತೀಚೆಗೆ ಬಿಜುಮಾ ಅವರಿಗೆ ಬರುತ್ತಿದ್ದ ಪಿಂಚಣಿ ಹಣವನ್ನು ಮಗಳಾದ ಜಂಗುಮಾ ಪಡೆದುಕೊಳ್ಳುತ್ತಿದ್ದಾರೆ ಅಂತ ಇಮಾಂಸಾಬ್ ಹೆಂಡತಿ ನನ್ನಿಮಾ ಜಂಗುಮಾ ಕಂಡಾಗ ಗ್ರಾಮದಲ್ಲಿ ಬೈದಾಡಿ ತಿರುಗುತ್ತಿದ್ದಂತೆ. ಹೀಗಾಗಿ ತಮ್ಮ ಮನೆಯಲ್ಲಿದ್ದ ತಾಯಿಯನ್ನು ಮಗಳು ಜಂಗುಮಾ ತನ್ನ ಅಣ್ಣನಾದ ಇಮಾಂಸಾಬ್ ಮನೆಗೆ ಹೋಗುವಂತೆ ಕಳುಹಿಸಿ ಬಿಟ್ಟಿದ್ದಾಳೆ.

Police Jeep 1

ಇತ್ತ ಮನೆಗೆ ಬಂದ ತಾಯಿ ಬಿಜುಮಾ ಅವರನ್ನು ಮನೆಗೆ ಸೇರಿಸಿಕೊಳ್ಳದ ಮಗ ಹಾಗೂ ಆತನ ಕುಟುಂಬಸ್ಥರು ಮನೆಯಿಂದ ಹೊರಗೆ ಹಾಕಿದ್ದಾರೆ. ಈ ವಿಚಾರದಲ್ಲಿ ಗ್ರಾಮದ ಹಿರಿಯ ಮುಖಂಡರು ಎರಡು ಕುಟುಂಬಸ್ಥರನ್ನು ಕರೆಯಿಸಿ ಮಸೀದಿಯಲ್ಲಿ ಭಾನುವಾರ ರಾಜೀ ಪಂಚಾಯಿತಿಗೆ ಮುಂದಾಗಿದ್ದರು. ಆದರೆ ಈ ವೇಳೆ ಇಮಾಂಸಾಬ್ ಕಡೆಯವರು ಎನ್ನಲಾದ ಅಪರಿಚಿತರ ಗುಂಪು ಜಂಗುಮಾ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ದುಷ್ಕರ್ಮಿಗಳು ಜಂಗುಮಾ ಹಾಗೂ ಮಕ್ಕಳಾದ ಬಿಬಿಜಾನ್, ರೇಷ್ಮಾ ಮತ್ತು ಅವರ ಅಳಿಯನಾದ ಮೌಲಾ ಸೇರಿದಂತೆ ಬಿಬಿಜಾಂಗ್ ಮಗಳಾದ ಅಲಿಯಾ ಮೇಲೆ ಮಚ್ಚು ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಗಾಯಾಳುಗಳು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Doctor

ಗಂಭೀರವಾಗಿ ಗಾಯಗೊಂಡ ಐವರಲ್ಲಿ ಬಿಬಿಜಾನ್ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಗಾಯಾಳುಗಳ ಸಂಬಂಧಿಕರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಮಗ ಹಾಗೂ ಮಗಳ ನಡುವಿನ ಜಗಳದಲ್ಲಿ ಹೆತ್ತತಾಯಿ ಬೀದಿಗೆ ಬಿದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *