ಚಿಕ್ಕಬಳ್ಳಾಪುರ: ಸಾಲದ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 12ರಂದು ದೊಡ್ಡಬಳ್ಳಾಪುರ ತಾಲೂಕಿನ ಚನ್ನಾಪುರ ಬಳಿ ಚಂದ್ರಗಿರಿ ಬೆಟ್ಟಕ್ಕೆ ಹೋಗುವ ರಸ್ತೆಬದಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬೆಂಗಳೂರು ಮೂಲದ ಮೆಲ್ವಿನ್, ರವಿ, ನಿಖಿಲ್ ಕುಮಾರ್, ಕುಶಾಲ್, ಮೋಹನ್, ವಿಘ್ನೇಶ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಮೃತ ವ್ಯಕ್ತಿ 35 ವರ್ಷದ ವಿನು ಪ್ರಸಾದ್, ಎ 1 ಆರೋಪಿ ಮೆಲ್ವಿನ್ ಬಳಿ ಸಾಲ ಪಡೆದುಕೊಂಡಿದ್ದನು. ಸಾಲದ ಹಣ ವಾಪಸ್ ಕೊಡುವಂತೆ ಮೆಲ್ವಿನ್ ಕೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಹೀಗಾಗಿ ಪ್ಲಾನ್ ಮಾಡಿ ಪಾರ್ಟಿ ಮಾಡೋಣ ಬಾ ಅಂತ ವಿನು ಪ್ರಸಾದ್ ತನ್ನ ಸ್ನೇಹಿತರ ಜೊತೆಗೆ ಚಂದ್ರಗಿರಿ ಬೆಟ್ಟದ ಕಡೆಗೆ ಕರೆದುಕೊಂಡು ಬಂದಿದ್ದನು. ಮೆಲ್ವಿನ್ ಕುಡಿದ ಅಮಲಿನಲ್ಲಿ ಮತ್ತೆ ಜಗಳ ಮಾಡಿದ್ದಾನೆ. ಈ ವೇಳೆ ಮೊದಲೇ ಪ್ಲಾನ್ ಮಾಡಿದಂತೆ ಎಲ್ಲರೂ ಸೇರಿಕೊಂಡು ವಿನು ಪ್ರಸಾದ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು.