ಚಿಕ್ಕಬಳ್ಳಾಪುರ: ಮಹಿಳಾ ಮತದಾರರ ಮನವೊಲಿಕೆಗಿಳಿದಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್, ವಿಧಾನಸಭಾ ಚುನಾವಣೆ ಹತ್ತಿರವಾಗಿದ್ದಂತೆ ಮಹಿಳೆಯರಿಗೆ ಬಂಪರ್ ಗಿಫ್ಟ್ ಹಂಚುವುದರ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ್ಯಾಂತ 35,000 ಮಂದಿ ಮಹಿಳೆಯರಿಗೆ ಗೃಹಪಯೋಗಿ ಮಿಕ್ಸಿ ಉಡುಗೊರೆ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಸಖತ್ ಸುದ್ದಿಗೆ ಗ್ರಾಸವಾಗಿದ್ದಾರೆ. ಅಂದ ಹಾಗೆ ಸಂಕ್ರಾಂತಿ ಹಬ್ಬದಂದು ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದ್ದ ಶಾಸಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರಿಗೆ ಈ ಬಾರಿ ಮಿಕ್ಸಿ ನೀಡುವ ಮೂಲಕ ಮನೆ ಮಾತಾಗಿದ್ದಾರೆ.
ನಗರದ ಸಿಟಿಜನ್ ಕ್ಲಬ್ ಆವರಣದಲ್ಲಿ ಮಹಿಳೆಯರಿಗೆ ಮಿಕ್ಸಿ ವಿತರಣೆ ಮಾಡುತ್ತಿದ್ದು, ಉಚಿತ ಮಿಕ್ಸಿ ಪಡೆಯಲು ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಮಿಕ್ಸಿ ಪಡೆಯುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆ ಮುನ್ನವೂ ಮಹಿಳಾ ಮತದಾರರಿಗೆ ಕುಕ್ಕರ್ ನೀಡಿದ್ದರು. ಇದಲ್ಲದೆ ಸಂಕ್ರಾಂತಿ ಸುಗ್ಗಿ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮದ ಆಹ್ವಾನ ನೆಪದಲ್ಲಿ ಕ್ಷೇತ್ರದ ಲಕ್ಷಾಂತರ ಮಂದಿ ಮಹಿಳೆಯರಿಗೆ ಉಚಿತ ಸೀರೆ ಕೂಡ ಉಡಗೊರೆಯಾಗಿ ಕೊಟ್ಟಿದ್ದರು.