ಚಿಕ್ಕಬಳ್ಳಾಪುರ: ಗಂಡ ಹೆಂಡತಿ ನಡುವೆ ಜಗಳ ನಡೆದು, ಗಂಡ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ (ಉಪ್ಪಕುಂಟೆ) ಗ್ರಾಮದಲ್ಲಿ ನಡೆದಿದೆ.
ಪತ್ನಿ ಮಧುರ(24)ಳನ್ನು ಪತಿ ಬಾಲಚಂದ್ರ ಚೇಳೂರು(28) ಕೊಲೆ ಮಾಡಿದ್ದಾನೆ. ಖಾಸಗಿ ಬಸ್ ಚಾಲಕನಾಗಿದ್ದ ಬಾಲಚಂದ್ರ ಮಧುರಾಳನ್ನ ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಈ ದಂಪತಿಗೆ 11 ತಿಂಗಳ ಮುದ್ದಾದ ಮಗು ಇದೆ. ಹೆರಿಗೆ ನಂತರ ತವರು ಮನೆಗೆ ಬಂದಿದ್ದ ಮಧುರ, ತವರು ಮನೆಯಲ್ಲಿಯೇ ಇದ್ದಳು. ಹೀಗಾಗಿ ಬಾಲಚಂದ್ರ ಕೂಡ ಆಗಾಗ ಪತ್ನಿಯ ತವರು ಮನಗೆ ಬಂದು ಹೋಗುತ್ತಿದ್ದ.
ಭಾನುವಾರವಾದ ನಿನ್ನೆ ಮಾಂಸದ ಅಡುಗೆ ಮಾಡಿದ್ದು, ಸಾರಿಗೆ ಉಪ್ಪು ಜಾಸ್ತಿ ಅಂತ ತಡರಾತ್ರಿ ಮಧುರ ಜೊತೆ ಬಾಲಚಂದ್ರ ಜಗಳ ಮಾಡಿದ್ದಾನೆ. ಮೊದಲೇ ಮದ್ಯ ವ್ಯಸನಿ ಹಾಗೂ ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡೋ ಪ್ರವೃತ್ತಿ ಇದ್ದಿದ್ದರಿಂದ, ದಿನಾ ಇದ್ದಿದ್ದೇ ಅಂತ ಮನೆಯವರು ಸುಮ್ಮನಾಗಿದ್ದಾರೆ.
ಆದರೆ ಪಾಪಿ ಬಾಲಚಂದ್ರ ಮಾತ್ರ ತನ್ನ ಪತ್ನಿಯನ್ನು ನೇರವಾಗಿ ರೂಮಿನೊಳಗೆ ಕರೆದೊಯ್ದು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆ ಅಂತ ಬಿಂಬಿಸಲು ಸಹ ಪ್ರಯತ್ನಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಚೇಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪತಿ ಮಹಾಶಯ ಬಾಲಚಂದ್ರನನ್ನ ಬಂಧಿಸಿ ಮುಂದಿನ ಕಾನೂನುಕ್ರಮ ಕೈಗೊಂಡಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 342(ಮಹಿಳೆಯ ಆತ್ಮಗೌರವಕ್ಕೆ ಚ್ಯುತಿ) 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.