ಚಿಕ್ಕಬಳ್ಳಾಪುರ: ಮಾನವನ ಆಸೆಗೆ ಕೊನೆಯಿಲ್ಲ. ಆಸ್ತಿ, ಹಣ, ಅಂತಸ್ತು ಮಾಡಬೇಕು ಎಂದು ನೆಮ್ಮದಿ ಕಳೆದುಕೊಂಡು ಜಂಜಾಟಗಳ ಹಿಂದೆ ಬೀಳುತ್ತಾನೆ. ಇದರ ಮಧ್ಯೆ ಅದೆಷ್ಟು ಜನ ಬದುಕು ಕಟ್ಟಿಕೊಳ್ಳೋ ಭರದಲ್ಲಿ ಅನಾಥ ಸಾವು ಕಾಣೋದನ್ನು ಕಂಡಿದ್ದೀವಿ. ಹೀಗೆ ಸತ್ತಾಗ ಯಾರೂ ಇಲ್ಲದ ಅನಾಥ ಶವಗಳಿಗೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡುವ ಮೂಲಕ, ಚಿಕ್ಕಬಳ್ಳಾಪುರದ ಹೊಟೇಲ್ ರಾಮಣ್ಣ ಮಾನವೀಯತೆಯನ್ನು ಮೆರೆದಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿವೆ ಪ್ರದೇಶದಲ್ಲಿ ಸಿಕ್ಕಿದ್ದ ಅನಾಥ ಶವದ ಅಂತ್ಯಕ್ರಿಯೆ ನೇರವೇರಿಸುವ ಮೂಲಕ ಹೋಟೆಲ್ ರಾಮಣ್ಣ ಅನಾಥ ಶವಕ್ಕೆ ಮುಕ್ತಿ ಕೊಡಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಸಾಥ್ ನೀಡಿದ ರಾಮಣ್ಣ, ಅಂತ್ಯ ಸಂಸ್ಕಾರದ ಗುಂಡಿ ಅಗೆಯಲು ಜೆಸಿಬಿ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆ, ಪೂಜಾ ಕಾರ್ಯಕ್ಕೆ ಹೂ, ಉದುಕಡ್ಡಿ, ಕರ್ಪೂರ ಸೇರಿದಂತೆ ಕಲ್ಪಿಸಿ ಅಂತ್ಯಕ್ರಿಯೆ ನೇರವೇರಿಸೋಕೆ ಸಹಾಯ ಮಾಡಿದ್ದಾರೆ. ಸತ್ತವರು ಅನಾಥವಾಗಬಾರದೆಂದು ಪರಿತಪಿಸೋ ರಾಮಣ್ಣ, ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಲು ಸಾಥ್ ನೀಡಿದ್ದಾರೆ.
Advertisement
Advertisement
ಎಲ್ಲೋ ವಿದೇಶದಿಂದ ಬಂದು ನಮ್ಮ ಊರಲ್ಲಿ ಸತ್ತರೂ ಅವರ ದೇಶಕ್ಕೆ ನಮ್ಮ ಸರ್ಕಾರವೇ ಮುಂದೆ ನಿಂತು ಎಲ್ಲಾ ಸೌಲಭ್ಯಗಳನ್ನ ಕಲ್ಪಿಸಿ ಕಳಿಸಿಕೊಡಲಾಗುತ್ತೆ. ಆದರೆ ನಮ್ಮ ಊರಲ್ಲಿ ಸತ್ತರೂ ನಾವು ಯಾಕೆ ಅವರ ಅಂತ್ಯ ಸಂಸ್ಕಾರ ಮಾಡಬಾರದು ಅಂತಾರೆ ರಾಮಣ್ಣ. ಅಡುಗೆ ಭಟ್ಟರಾಗಿ ಸಂಪಾದನೆ ಮಾಡೋ ರಾಮಣ್ಣ ಸುಪ್ರೀಂಕೋರ್ಟ್ ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯ ಹೆಲ್ಮೆಟ್ ಮಾಡಿದಾಗ ಬಡ ಸವಾರರಿಗೆ ಉಚಿತವಾಗಿ ನೂರಾರು ಹೆಲ್ಮೆಟ್ ಗಳನ್ನು ನೀಡುವ ಮೂಲಕ ಹೆಲ್ಮೆಟ್ ರಾಮಣ್ಣ ಅಂತಲೇ ಫೇಮಸ್ ಆಗಿದ್ದರು. ಈ ಹಿಂದೆಯೂ ಹಲವು ಅನಾಥ ಶವಗಳಿಗೆ ಮುಕ್ತಿ ಕಲ್ಪಿಸೋ ಕಾಯಕ ಮಾಡಿದ್ದ ರಾಮಣ್ಣ, ಮುಂದೆಯೂ ಅನಾಥ ಶವಗಳು ಸಿಕ್ಕರೆ ಕರೆ ಮಾಡಿ ನಾನು ಸಹಾಯ ಮಾಡುವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.