ಚಿಕ್ಕಬಳ್ಳಾಪುರ: ಹೆಲ್ಮೆಟ್ ಧರಿಸದೆ ಬರುತ್ತಿದ್ದ ಪೊಲೀಸರ ಬೈಕ್‍ನ್ನು ಅಡ್ಡಗಟ್ಟಿದ ಸಾರ್ವಜನಿಕರು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಬಳಿ ನಡೆದಿದೆ.
ಆಂದಹಾಗೆ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಪಿಂಡಿಪಾಪನಹಳ್ಳಿ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿದ್ದರು. ಹೆಲ್ಮೆಟ್ ಧರಿಸದೆ ಬಂದ ಕಾಂಗ್ರೆಸ್ ಮುಖಂಡ ಪಂಚಾಕ್ಷರಿರೆಡ್ಡಿಯವರ ಬೈಕ್ ತಡೆದು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ದಂಡ ಹಾಕಲು ಮುಂದಾಗಿದ್ದಾರೆ.
ಪೊಲೀಸರು ಏಕವಚನದಲ್ಲಿ ಮಾತಾನಾಡಿಸಿದ್ದಾರೆ ಎಂದು ಪೊಲೀಸರ ವರ್ತನೆಗೆ ಕೆರಳಿದ ಪಂಚಾಕ್ಷರಿರೆಡ್ಡಿ ಬೆಂಬಲಿಗರು ಪೊಲೀಸರು ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ರಸ್ತೆ ತಡೆ ನಡೆಸಿ ವಾಹನಗಳನ್ನು ಅಡ್ಡಗಟ್ಟಿ ರಸ್ತೆ ಬಂದ್ ಮಾಡಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಹೆಚ್ಚಿನ ಬಂದೋಬಸ್ತ್‍ಗೆಂದು ಬೈಕಿನಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಹಾಕಿರಲಿಲ್ಲ. ಇದನ್ನು ಕಂಡ ಸಾರ್ವಜನಿಕರು, ನಮ್ಮ ಬಳಿ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ಹಾಕ್ತಿರಲ್ಲ. ಯಾಕೆ ನೀವ್ ಹೆಲ್ಮೆಟ್ ಹಾಕಿಲ್ಲ. ಎಲ್ಲಿ ಫೈನ್ ಕಟ್ಟಿದ್ದೀರಾ ಎಂದು ಪೊಲೀಸರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ. ಪೊಲೀಸರ ಮೇಲೆ ಸಾರ್ವಜನಿಕರು ಮುಗಿಬಿದ್ದಿರುವ ಈ ಎರಡು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.