ಸಾಮಾನ್ಯ ಸಭೆಗಳಿಗೆ ಗೈರು – 6 ಮಂದಿ ಗ್ರಾಮಪಂಚಾಯತಿ ಸದಸ್ಯರು ಅನರ್ಹ

Public TV
2 Min Read
Chikkaballapur Gram Panchayat

ಚಿಕ್ಕಬಳ್ಳಾಪುರ: ನಿರಂತರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾದ ಹಿನ್ನಲೆ 6 ಜನ ಗ್ರಾಮ ಪಂಚಾಯ್ತಿ ಸದಸ್ಯರು ಅನರ್ಹಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾರವರು ಈ ಆದೇಶ ಹೊರಡಿಸಿದ್ದಾರೆ. ಅಂದಹಾಗೆ ಸಾತನೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಎ ಕೆ ಜಿಲಾನಿ, ಕೆ. ಬಚ್ಚಪ್ಪ, ಸೌಭಾಗ್ಯ, ಶ್ವೇತಾ ಎಂ ಹಾಗೂ ಮಾಜಿ ಪಂಚಾಯಿತಿ ಉಪಾಧ್ಯಕ್ಷೆ ಟಿ ಪ್ರಮೀಳಾ, ಹಾಗೂ ಹಾಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯ ಭಾರತಿ ಅನರ್ಹಗೊಂಡಿದ್ದಾರೆ.

Chikkaballapur Gram Panchayat2

ಲಂಚ ಪಡೆದು ಲೋಕಾಯುಕ್ತ ಹಾಗೂ ಎಸಿಬಿಯಿಂದ ಸಿಕ್ಕಿಬಿದ್ದಿದ್ದ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಎಂಬಾತನನ್ನ ಮರಳಿ ಪಂಚಾಯಿತಿಗೆ ಸೇರಿಸಿಕೊಳ್ಳಲು ಈ ಆರು ಜನ ಅನರ್ಹಗೊಂಡ ಸದಸ್ಯರು ಮುಂದಾಗಿದ್ದರು ಎನ್ನಲಾಗಿದೆ. ಹೀಗಾಗಿ ತಮಗೆ ಸಹಾಯವಾಗುತ್ತಿದ್ದ ಬಿಲ್ ಕಲೆಕ್ಟರ್ ಮಂಜುನಾಥ್ ನನ್ನು ಕಳೆದ 2018 ರ ಸಾಮಾನ್ಯ ಸಭೆಯಲ್ಲಿ ಮರಳಿ ಪಂಚಾಯಿತಿಗೆ ಸೇರಿಸಿಕೊಳ್ಳುವಂತೆ ನಡವಳಿಕೆಯನ್ನು ಸಿದ್ಧಪಡಿಸಿದ್ದರು.

ಲಂಚ ಪಡೆದು ಎಸಿಬಿ ಹಾಗೂ ಲೋಕಾಯುಕ್ತರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಂಜುನಾಥ್‍ನನ್ನ ತೆಗೆದುಕೊಳ್ಳಲು ನಡವಳಿಕೆ ಸಿದ್ಧಪಡಿಸಿದ್ದ 6 ಜನರ ಸದಸ್ಯರನ್ನ ಅನರ್ಹಗೊಳಿಸುವಂತೆ ಪಿಡಿಓ ರಮೇಶ್ ಶಿಫಾರಸ್ಸು ಮಾಡಿದ್ದರು. ಆದರೆ ಈ ಘಟನೆಯಾದ ನಂತರ ನಡೆದ ನಿರಂತರ ನಾಲ್ಕು ಸಭೆಗಳಿಗೆ ಈ 6 ಜನ ಪಂಚಾಯಿತಿ ಸದಸ್ಯರು ಗೈರಾಗಿದ್ದರು. ಈ ಬಗ್ಗೆಯೂ ಸರ್ಕಾರಕ್ಕೆ ಪಿಡಿಓ ಶಿಫಾರಸ್ಸು ಮಾಡಿದ್ದು, ಇದೀಗ ವಿಧಾನಸಭೆಯಲ್ಲಿ ಎಂಎಲ್‍ಎಗಳು ಅನರ್ಹವಾಗುವಂತೆ ಸದ್ಯ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಸದಸ್ಯ ಸ್ಥಾನದಿಂದ ವಜಾಗೊಂಡು ಅನರ್ಹಗೊಂಡಿದ್ದಾರೆ.

Chikkaballapur Gram Panchayat4

ಭ್ರಷ್ಟ ಮಂಜುನಾಥ್‍ಗೆ ಸಹಾಯ ಮಾಡಲು ಹೋಗಿ ತಮ್ಮ ಸದಸ್ಯತ್ವ ಸ್ಥಾನವನ್ನೇ ಈ ಸದಸ್ಯರು ಕಳೆದುಕೊಂಡಿದ್ದಾರೆ. ಸತತವಾಗಿ ಎರಡು ವರ್ಷಗಳ ಕಾಲ ಸಾಮಾನ್ಯ ಸಭೆಗಳಿಗೆ ಹಾಜರಾಗದೇ ಇದ್ದ ಕಾರಣ ಇದೇ ಸದಸ್ಯರಿಂದ ಅಭಿವೃದ್ಧಿ ಕೆಲಸಗಳಿಗೆ ಅನುಮೋದನೆ ದೊರಕುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಆಗದೆ ಪರದಾಡುವಂತಾಗಿತ್ತು. ಸದ್ಯ ನಿರಂತರ ಗೈರು ಹಿನ್ನಲೆ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ 1993 ರ 48 (4) ರ ಪ್ರಕಾರ ಉಪಾಧ್ಯಕ್ಷೆಯನ್ನ ಹಾಗೂ 1993 ಪ್ರಕರಣ 43 ಎ ಪ್ರಕಾರ ಸದಸ್ಯರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪಂಚಾಯಿತಿ ಸದಸ್ಯರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *