ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಬಹಳ ಮಂದಿ, ಪಾಳು ಬೀಳೋ ಸ್ಥಿತಿಯಲ್ಲಿರೋ ಕಟ್ಟಡಗಳು, ಮುರಿದ ಕಿಟಕಿಗಳು, ಬಾಗಿಲುಗಳೇ ಇಲ್ಲದ ಕೊಠಡಿಗಳು ಈ ತರ ಸರ್ಕಾರಿ ಶಾಲೆಗಳಲ್ಲಿ ನಾನಾ ಸಮಸ್ಯೆಗಳು, ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅಂದ-ಚೆಂದವಾಗಿ ಕಂಗೊಳಿಸುತ್ತಿದೆ.
ಅಂದಹಾಗೆ ಶಾಲೆಯ ಗೋಡೆಗಳ ಮೇಲೆ 3ಡಿ ಮಾದರಿಯಲ್ಲಿ ಬಸ್, ರೈಲು, ವಿಮಾನದ ಚಿತ್ರಗಳನ್ನ ಬಿಡಿಸಲಾಗಿದ್ದು, ಶಾಲೆಯ ಅಂದ ಚೆಂದವೇ ಬದಲಾಗಿ ಹೋಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಜೊತೆಗೂಡಿ ಗ್ರಾಮಪಂಚಾಯತಿ ಅನುದಾನ ಪಡೆದು ಶಾಲೆಯ ಗೋಡೆಗಳ ಮೇಲೆ ಈ ಚಿತ್ರಗಳನ್ನ ಬಿಡಿಸಲಾಗಿದ್ದು ಶಾಲೆಯ ರೂಪವೇ ಬದಲಾಗಿ ಬಣ್ಣ ಬಣ್ಣಗಳಿಂದ ಮಿಂಚುತ್ತಿದೆ.
Advertisement
Advertisement
ಶಾಲೆಯ ಹೊರಭಾಗದ ಗೋಡೆಗಳ ಮೇಲೆ ರೈಲು, ಬಸ್, ವಿಮಾನ ಹಾಗೂ ಹಡುಗು ಸೇರಿದಂತೆ ಶಾಲೆಯ ಕೊಠಡಿಗಳ ಒಳಭಾಗದಲ್ಲಿ ಶಿಡ್ಲಘಟ್ಟ ರೇಷ್ಮೆ ನಗರಿ ಅನ್ನೋ ಖ್ಯಾತಿ ಪ್ರತೀಕವಾಗಿ ರೇಷ್ಮೆ ಹುಳು. ಚಂದ್ರಿಕೆ ಹಾಗೂ ರೈತನ ಚಿತ್ರ ಬಿಡಿಸಲಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭವಾಗಿ 75 ವರ್ಷಗಳ ಕಳೆದ ಹಿನ್ನೆಲೆ ಅಮೃತ ಮಹೋತ್ಸವ ಸಮಾರಂಭ ನಡೆಸಿ, ಶಿಕ್ಷಣ ಇಲಾಖಾಧಿಕಾರಿಗಳು, ಹಾಗೂ ತಹಶೀಲ್ದಾರ್ ರನ್ನ ಶಾಲೆಗೆ ಆಹ್ವಾನಿಸಿ, ನೂತನ ಚಿತ್ರಗಳನ್ನು ಉದ್ಘಾಟನೆ ಮಾಡಲಾಗಿದೆ.
Advertisement
Advertisement
ಶಾಲೆಯ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸಾಕಷ್ಟು ಶ್ರಮಿಸುತ್ತಿದ್ದು, ಶಾಲೆಗಾಗಿ 9 ಎಕೆರೆ ಭೂಮಿಯನ್ನ ಮೀಸಲಿಡಲಾಗಿದೆ. ಈ ಜಾಗದಲ್ಲಿ ನೂರಾರು ಮರ ಗಿಡಗಳನ್ನ ಬೆಳೆಸಲಾಗುತ್ತಿದೆ. ಮತ್ತೊಂದೆಡೆ ಇದೇ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರ ಬಾ ಪುಲೆ ಹೆಸರನ್ನ ನಾಮಕರಣ ಮಾಡಲಾಗಿದೆ. ಸದ್ಯ ಶಾಲೆ ಬಣ್ಣ ಬಣ್ಣದ ಚಿತ್ರಗಳಿಂದ ಮಿರ ಮಿರ ಮಿಂಚುತ್ತಿದ್ದು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೂ ಶಾಲೆ ಮಾದರಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.