ಚಿಕ್ಕಬಳ್ಳಾಪುರ: ಮಕ್ಕಳಾಗದಂತೆ ಕುಟುಂಬ ನಿಯಂತ್ರಣ ಯೋಜನೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಣಂತಿಯರು ಹಾಸಿಗೆಯಿಲ್ಲದೆ ನೆಲದ ಮೇಲೆಯೇ ಮಲಗಿ ನರಳಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಹೆರಿಗೆ ನಂತರ ತಮ್ಮ ಹಾಲುಗಲ್ಲದ ಹಸುಗೂಸುಗಳೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದ ಬಾಣಂತಿ ಮಹಿಳೆಯರಿಗೆ ಕನಿಷ್ಠ ಹಾಸಿಗೆಯಿಲ್ಲದೆ ನೆಲವೇ ಆಸರೆಯಾಗಿದೆ. ಒಂದಲ್ಲ ಎರಡಲ್ಲ ಎಂದು 24 ಕೋಟಿ ರೂಪಾಯಿಯ ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಠ ಬಾಣಂತಿಯರಿಗೆ ಬೆಡ್ ಸಹ ಇಲ್ಲವೇ ಎಂಬುದೇ ವಿಪರ್ಯಾಸ.
ಅಂದಹಾಗೆ ಬೆಳಗ್ಗೆಯೇ 7 ಗಂಟೆಗೆ ಶಸ್ತ್ರಚಿಕಿತ್ಸೆಗೆ ಎಂದು ಜಿಲ್ಲಾಸ್ಪತ್ರೆಗೆ ಬಂದು ಮಧ್ಯಾಹ್ನದವರೆಗೂ ಕಾದಿದ್ದ ಬಾಣಂತಿ ಮಹಿಳೆಯರಿಗೆ 12 ಗಂಟೆ ತರುವಾಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹೀಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಣಂತಿಯರು ವಿಧಿಯಿಲ್ಲದೇ ಶಸ್ತಚಿಕಿತ್ಸಾ ಕೊಠಡಿಯ ಮುಂಭಾಗದಲ್ಲೇ ಎಲ್ಲರೂ ಸಂಜೆಯವರೆಗೂ ಮಲಗಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡಿ ಮಗು ಕಳೆದುಕೊಂಡ ತಾಯಿ!
ಅಸಲಿಗೆ ಹೆರಿಗೆ ನಂತರ ಬಾಣಂತಿಯರಿಗೆ ಸಹಜವಾಗಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಬಾಣಂತಿಯರಿಗೆ ಸಾಕಷ್ಟು ಸಮಯ ಕೂರಲು ನಿಲ್ಲಲು ಕಷ್ಟಕರವಾಗುತ್ತದೆ. ಅದರಲ್ಲೂ ಶಸ್ತ್ರಚಿಕಿತ್ಸೆ ನಂತರ ಸಾಕಷ್ಟು ಸುಸ್ತಾಗಿ ಇರುತ್ತಾರೆ. ಇಂತಹ ಬಾಣಂತಿಯರಿಗೆ ಸೂಕ್ತ ಆರೈಕೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ಇದ್ಯಾವುದರ ಪರಿವೇ ಇಲ್ಲದ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಬಾಣಂತಿಯರಿಗೆ ಬೆಡ್ ವ್ಯವಸ್ಥೆಯೂ ಮಾಡದೆ ನೆಲದ ಮೇಲೆಯೇ ಮಲುಗುವಂತೆ ತಾಕೀತು ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಪ್ರತಿಯೊಬ್ಬರೂ ಬಳಿ 1000 ರೂಪಾಯಿ ಲಂಚ ಪಡೆದಿರುವ ಅರೋಪ ಸಹ ಕೇಳಿಬಂದಿದೆ. ನಿನ್ನೆಯಷ್ಟೇ ಕೋಲಾರದ ಕೆಜಿಎಫ್ ಆಸ್ಪತ್ರೆಯಲ್ಲಿ ಇಂತದ್ದೇ ಒಂದು ಘಟನೆ ನಡೆದಿದ್ದು, ಹುಟ್ಟುವ ಮೊದಲೇ ಗಂಡು ಮಗು ಗರ್ಭದಲ್ಲಿ ಸಾವನ್ನಪ್ಪಿತ್ತು.