ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ನೂತನ ಶಕ್ತಿ ಕೇಂದ್ರ ಮಿನಿ ವಿಧಾನಸೌಧ ಕಟ್ಟಡವನ್ನು ಕಂದಾಯ ಸಚಿವ ಆರ್.ಅಶೋಕ್ ಲೋಕಾರ್ಪಣೆಗೊಳಿಸಿದರು.
ಗೌರಿಬಿದನೂರು ನಗರ ಹೊರವಲಯದ ಬೆಂಗಳೂರು ರಸ್ತೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣವಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್ ಬಚ್ಚೇಗೌಡ ಸಾಥ್ ನೀಡಿದರು.
Advertisement
Advertisement
ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರ ಕನಸಿನ ಕಟ್ಟಡ ಈ ಮಿನಿ ವಿಧಾನಸೌಧ. ಅಂದಹಾಗೆ ಕಳೆದ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಿನಿ ವಿಧಾನಸೌಧ ಕಟ್ಟಡಕ್ಕೆ ಅನುದಾನ ಮಂಜೂರಾಗಿ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭೂಮಿ ಪೂಜೆ ನೇರವೇರಿಸಿದ್ದರು. ಇಂದು ಆ ಕಟ್ಟಡ ಬಹಳಷ್ಟು ಸುಂದರವಾಗಿ ತಲೆ ಎತ್ತಿ ನಿಂತಿದ್ದು, ನೂತನ ಕಟ್ಟಡ ಸಾರ್ವಜನಿಕರಿಗೆ ಸದುಪಯೋಗವಾಗಲಿ ಎಂದು ಕಂದಾಯ ಸಚಿವ ಆರ್ ಅಶೋಕ್ ಶುಭ ಕೋರಿದರು.
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಅವರು, ಗೌರಿಬಿದನೂರು ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಸಕ್ಕರೆ ಕಾರ್ಖಾನೆಯವರು ಸೇರಿದಂತೆ ಕೆಲ ಬೇನಾಮಿ ವ್ಯಕ್ತಿಗಳು ಈ ಕಟ್ಟಡದ ಜಾಗವನ್ನು ಆಕ್ರಮಿಸಿಕೊಂಡಿದ್ದರು. ಆದರೆ ಅವರನ್ನೆಲ್ಲಾ ತೆರವುಗೊಳಿಸಿ ಈ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇವೆ. ಸದ್ಯ 20 ಇಲಾಖೆಗಳ ಕಚೇರಿಗಳನ್ನ ಈ ನೂತನ ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಸಾಮಾನ್ಯ ಜನರಿಗೆ ಒಂದೇ ಸೂರಿನಡಿ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನ ನೀಡಬೇಕು ಎನ್ನುವ ಸದುದ್ದೇಶದಿಂದ ಈ ಸೌಧ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
Advertisement
ಇದೊಂದು ಮಾದರಿ ಕಟ್ಟಡವಾಗಿದ್ದು, ಅಧಿಕಾರಿಗಳು ಸಹ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುವ ಮೂಲಕ ಮಾದರಿಯಾಗಬೇಕು. ಸಾರ್ವಜನಿಕರು ಈ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳುಬೇಕು ಎಂದು ಶಿವಶಂಕರರೆಡ್ಡಿ ತಿಳಿಸಿದರು.
ಇದೇ ವೇಳೆ ಮಿನಿವಿಧಾನಸೌಧ ಕಟ್ಟಡದ ಪಕ್ಕದಲ್ಲೇ 7.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಡಾ ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಸಮಾನತಾ ಸೌಧವನ್ನು ಸಹ ಲೋಕಾರ್ಪಣೆ ಮಾಡಲಾಯಿತು. ಈ ಕಟ್ಟಡ ಗ್ರಂಥಾಲಯ ಸೇರಿದಂತೆ 800 ಆಸನಗಳುಳ್ಳ ಬೃಹತ್ ಸಭಾಂಗಣ ಹೊಂದಿದ್ದು, ಸಿಇಟಿ, ನೀಟ್, ಬ್ಯಾಂಕಿಂಗ್, ಕೆಎಎಸ್, ಐಪಿಎಸ್, ಹಾಗೂ ಐಎಎಸ್ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡಲು ಕಟ್ಟಡ ಸದುಪಯೋಗವಾಗಲಿದೆ.
ಇದೇ ಕಟ್ಟಡದಲ್ಲಿ ಡಾ ಬಿ.ಆರ್.ಅಂಬೇಡ್ಕರ್ ಅವರ ಬದುಕು, ಹೋರಾಟ ಹಾಗೂ ಸಾಧನೆಗಳನ್ನು ಬಿಂಬಿಸುವ ಚಿತ್ರಪಟ ಫೋಟೋ ಗ್ಯಾಲರಿಯನ್ನು ಮುಂದಿಮ ದಿನಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ಎನ್.ಬಚ್ಚೇಗೌಡ ಅವರು, ಶಾಸಕ ಶಿವಶಂಕರರೆಡ್ಡಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದ ಶಾಸಕ ಶಿವಶಂಕರರೆಡ್ಡಿ, ಸರ್ಕಾರ ಘೋಷಣೆ ಮಾಡಿರುವ ನೂತನ ಮಂಚೇನಹಳ್ಳಿ ತಾಲೂಕಿಗೆ ನಮ್ಮ ಕ್ಷೇತ್ರದ 4 ಗ್ರಾಮ ಪಂಚಾಯತಿಗಳನ್ನು ಸೇರಿಸಲಾಗಿದೆ. ಆದರೆ ಇದಕ್ಕೆ ಜನರ ವಿರೋಧವಿದ್ದು, ಸಚಿವರು ಮಂಚೇನಹಳ್ಳಿ ತಾಲೂಕಿಗೆ ಸೇರ್ಪಡೆ ಮಾಡಲಾಗಿರುವ 4 ಗ್ರಾಮ ಪಂಚಾಯತಿಗಳನ್ನ ಕೈ ಬಿಡಬೇಕು ಎಂದು ಆಗ್ರಹಿಸಿದರು.