ಚಿಕ್ಕಬಳ್ಳಾಪುರ: ತಮ್ಮೂರಿನ ರೈತರೊಬ್ಬರು ಬಿತ್ತನೆ ಮಾಡುವುದಕ್ಕೆ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಗ್ಲಾಡಿಯೋಲಸ್ ಗಡ್ಡೆಗಳನ್ನ ಕದ್ದು ಮೂವರು ಯುವಕರು ಜೈಲುಪಾಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಕಾಡದಿಬ್ಬೂರ ಗ್ರಾಮದ ರೈತ ಗೋಪಾಲ ಹಾಗೂ ಮುನಿರಾಜು ಎಂಬವರು ತೋಟದ ಮನೆಯಲ್ಲಿ ಬಿತ್ತನೆಗೆ ಅಂತ ಸಂಗ್ರಹಿಸಿಟ್ಟಿದ್ದ ಬೀಜಗಳನ್ನು ಅದೇ ಗ್ರಾಮದ ಶ್ರೀನಿವಾಸ್, ಅನಿಲ್, ಆನಂದ ನೋಡಿದ್ದರು. ರಾತ್ರೋರಾತ್ರಿ ಕಾಡದಿಬ್ಬೂರ ಬಳಿ ತೋಟದ ಮನೆಗೆ ನುಗ್ಗಿ, ತೋಟದ ಮನೆಯ ಕಿಟಕಿ ಕಿತ್ತು ಮೂರು ಲಕ್ಷ ರೂಪಾಯಿ ಮೌಲ್ಯದ ಗ್ಲಾಡಿಯೋಲಸ್ ಬೀಜಗಳನ್ನು ಟೆಂಪೋದಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
Advertisement
Advertisement
ಕಳ್ಳತನವಾದ ದಿನದ ರಾತ್ರಿ ಆ ಗ್ರಾಮದ ರಸ್ತೆಯಲ್ಲಿ ಟೆಂಪೋವೊಂದು ಹಾದು ಹೋಗಿರುವುದನ್ನು ತಮ್ಮೂರಿನ ಸಿಸಿಟಿವಿಯಲ್ಲಿ ಪತ್ತೆಹಚ್ಚಿದ ರೈತರು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ವಿಡಿಯೋ ಪಡೆದು ತನಿಖೆಗಿಳಿದ ಪೊಲೀಸರು ಟೆಂಪೋ ಅದೇ ಗ್ರಾಮದ್ದು ಎನ್ನುವುದನ್ನು ಖಚಿತಪಡಿಸಿಕೊಂಡಿದ್ದರು. ಆದರೆ ಟೆಂಪೋ ನಾಪತ್ತೆಯಾಗಿತ್ತು. ಹೀಗಾಗಿ ಬಲವಾದ ಅನುಮಾನದ ಮೇರೆಗೆ ಟೆಂಪೋ ಮಾಲೀಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಬಳಿಕ ಮೂವರನ್ನು ಬಂಧಿಸಿದ ಪೊಲೀಸರು, ಗ್ಲಾಡಿಯೋಲಸ್ ಬೀಜಗಳನ್ನು ವಶಕ್ಕೆ ಪಡೆದು ರೈತರಿಗೆ ಒಪ್ಪಿಸಿದ್ದಾರೆ.
Advertisement
ಈರುಳ್ಳಿಗಿಂತ ಬಲು ದುಬಾರಿ ಈ ಗಡ್ಡೆಗಳು:
ನೋಡುವುದಕ್ಕೆ ಥೇಟ್ ಇತ್ತೀಚೆಗೆ ಬಂದ ಈಜಿಫ್ಟ್ ಈರುಳ್ಳಿಯಂತೆ ಕಾಣೋ ಗ್ಲಾಡಿಯೋಲಸ್ ಗಡ್ಡೆಗಳು ಈರುಳ್ಳಿಗಿಂತ ಬಲು ದುಬಾರಿ. ಸದ್ಯ ಮಾರುಕಟ್ಟೆಯಲ್ಲಿ 200ರ ಗಡಿ ದಾಟಿದ್ದ ಈರುಳ್ಳಿ ಬೆಲೆ ಸದ್ಯ ಒಂದು ಕೆ.ಜಿ. ಈರುಳ್ಳಿಗೆ ಐವತ್ತು ರೂಪಾಯಿ ಇದೆ. ಆದರೆ ಗ್ಲಾಡಿಯೋಲಸ್ ಗಡ್ಡೆಗಳ ಬೆಲೆ ಒಂದು ಕೆಜಿಗೆ 350 ರೂಪಾಯಿಯಿಂದ ಐನೂರು ರೂಪಾಯಿಯಂತೆ. ಇದರ ಹೂಗಳನ್ನು ನೋಡಿದರೆ ಎಂಥವರು ಮಾರು ಹೋಗುತ್ತಾರೆ.
Advertisement
ಮದುವೆ ಸೇರಿದಂತೆ ಶುಭಸಮಾರಂಭಗಲ್ಲಿ ಅಲಂಕಾರ ಮಾಡೋಕೆ ಗ್ಲಾಡಿಯೋಲಸ್ ಹೂಗಳಿಗೆ ಭಾರೀ ಡಿಮ್ಯಾಂಡ್. ಈ ಕಾರಣಕ್ಕೆ ಇದರ ಹೂಗಳಿಗೆ ಮಾರುಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಆದರೆ ಗ್ಲಾಡಿಯೋಲಸ್ ಗಡ್ಡೆಗಳು ಸಿಗುವುದು ಬಹಳ ಕಷ್ಟ. ಹೀಗಾಗಿ ಗಡ್ಡೆಗಳನ್ನು ಆರೋಪಿಗಳು ಕಳವು ಮಾಡಿದ್ದಾರೆ. ಒಮ್ಮೆ ಗ್ಲಾಡಿಯೋಲಸ್ ಗಡ್ಡೆಗಳ ಬಿತ್ತನೆ ಮಾಡಿದರೆ ಮೂರ್ನಾಲ್ಕು ಬಾರಿ ಹೂಗಳ ಬೆಳೆ ಬರುತ್ತದೆ. ನಂತರ ಅದರ ಗಡ್ಡೆಗಳನ್ನು ತೆಗೆದು ಮರುಬಿತ್ತನೆ ಇಲ್ಲವೆ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈ ಹೂಗಳು ಹಾಗೂ ಬಿತ್ತನೆ ಗಡ್ಡೆಗಳಿಗೆ ಭಾರೀ ಡಿಮ್ಯಾಂಡ್ ಇರುವ ಕಾರಣ, ರೈತರು ಬೆಳೆದ ಬಿತ್ತನೆ ಗಡ್ಡೆಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ.