ಚಿಕ್ಕಬಳ್ಳಾಪುರ: ಸಿಎಂ ವಿರುದ್ಧ ಮುನಿಸಿಕೊಂಡಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅತೃಪ್ತ ಶಾಸಕ ಡಾ ಕೆ. ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿ ಸೇರೋದು ಪಕ್ಕನಾ ಅನ್ನೋ ಅನುಮಾನ ಮತ್ತಷ್ಟು ಬಲವಾಗ್ತಿದೆ. ಈ ಅನುಮಾನಗಳಿಗೆ ಪುಷ್ಠಿ ಕೊಡುವಂತೆ, ಸದ್ದಿಲ್ಲದೇ ಶಾಸಕ ಸುಧಾಕರ್ ತಂದೆ ಪಿ.ಎನ್ ಕೇಶವರೆಡ್ಡಿ ಕೆಲ ರಹಸ್ಯ ಸಭೆಗಳನ್ನು ನಡೆಸುತ್ತಿದ್ದು, ಸಮ್ಮಿಶ್ರ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದಾರೆ.
ಸತತ ಎರಡನೇ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಸುಧಾಕರ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದ ಸುಧಾಕರ್ ಪದೇ ಪದೇ ಸರ್ಕಾರದ ವಿರುದ್ಧ ಅಸಮಾಧಾನದ ಮಾತುಗಳನ್ನಾಡುತ್ತಲೇ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ ಸಮ್ಮಿಶ್ರ ಸರ್ಕಾರದ ವಿರೋಧ ಕಟ್ಟಿಕೊಂಡ ಸುಧಾಕರ್ ಬಿಜೆಪಿ ನಾಯಕರ ಜೊತೆ ಓಡನಾಟ ಹೊಂದಿಕೊಂಡು ಅಪರೇಷನ್ ಕಮಲದತ್ತ ಮುಖ ಮಾಡಿದ್ದಾರೆ ಎಂದು ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿರುವ ವಿಷಯ.
Advertisement
Advertisement
ಸರ್ಕಾರ ಉಳಿಸಿಕೊಳ್ಳೋಕೆ ಕೇವಲ ಪಕ್ಷೇತರರಿಗೆ ಸಚಿವ ಸ್ಥಾನ ಕೊಟ್ಟಿರುವುದರಿಂದ ಮತ್ತಷ್ಟು ಅಸಮಾಧಾನಗೊಂಡಿರೋ ಶಾಸಕ ಸುಧಾಕರ್ ಒಳಗೊಳಗೆ ಬಿಜೆಪಿ ಪಕ್ಷ ಸೇರೋಕೆ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ತಂದೆಯ ನೇತೃತ್ವದಲ್ಲಿ ಇಡೀ ಕ್ಷೇತ್ರದಲ್ಲಿ ಬೆಂಬಲಿಗರ ಜೊತೆ ರಹಸ್ಯ ಸಭೆಗಳನ್ನು ನಡೆಸಿ ಪಕ್ಷ ಬಿಡುವ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಳೆದ ಎರಡು ದಿನಗಳಿಂದ ಬೆಂಬಲಿಗರ ಜೊತೆ ಸಭೆ ನಡೆಸಿ ಮಾತನಾಡಿರುವ ಶಾಸಕ ಸುಧಾಕರ್ ತಂದೆ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಪಿ.ಎನ್ ಕೇಶವರೆಡ್ಡಿ ಸಮ್ಮಿಶ್ರ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದು ಸ್ವತಃ ವರಿಷ್ಠರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಇದರ ಬಗ್ಗೆ ಮಾತನಾಡಿರುವ ಕೇಶವರೆಡ್ಡಿ ಅವರು, ಮೊದಲ ಬಾರಿ ಗೆದ್ದರು ವರಿಷ್ಠರ ಮಕ್ಕಳಿಗೆ ಸಚಿವ ಸ್ಥಾನ ಕೊಡುತ್ತಾರೆ. ಆದರೆ ಎರಡು ಬಾರಿ ಗೆದ್ದರು ನನ್ನ ಮಗನಿಗೆ ಸಚಿವ ಸ್ಥಾನ ಇಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಅನುದಾನ, ಸುಧಾಕರ್ ಮಾಡಿದ ಅಭಿವೃದ್ಧಿ ಕೆಲಸಗಳು ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಾಡಲಾಗುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ರಾಜ್ಯ ಮಟ್ಟದ ಕೆಲ ನಾಯಕರು ಸ್ವಾರ್ಥಕ್ಕಾಗಿ ಜೆಡಿಎಸ್ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ ಎಂದು ಮೈತ್ರಿ ಪಕ್ಷದ ವಿರುದ್ಧ ಗುಡುಗಿದರು.
ನನ್ನ ಮಗ ಸುಧಾಕರ್ ಬೆಳೆದು ಬಿಡುತ್ತಾನೆ ಎಂದು ಸಚಿವ ಸ್ಥಾನ ಕೊಡುತ್ತಾ ಇಲ್ಲ. ನಿಗಮ ಮಂಡಳಿಯೂ ಕೊಡಲಿಲ್ಲ. ಇದಲ್ಲದೇ ಕನಿಷ್ಠ ಕ್ಷೇತ್ರಕ್ಕೆ ಅನುದಾನವನ್ನೇ ಕೊಡದೇ ತಾರತಮ್ಯ ಮಾಡುತ್ತಿದ್ದಾರೆ. ಹೀಗಾಗಿ ನಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರೋದಾದ್ರೇ ತಾವೆಲ್ಲಾ ಬೆಂಬಲಿಸುತ್ತಿರಾ ಅನ್ನೋ ಪ್ರಶ್ನೆಯನ್ನು ಬೆಂಬಲಿಗರ ಮುಂದಿಟ್ಟಿದ್ದೇವೆ. ಇದಕ್ಕೆ ಬೆಂಬಲಿಗರೆಲ್ಲರೂ ಕೂಡ ಶಾಸಕರು ಎಲ್ಲಿದ್ರೇ ಅಲ್ಲೇ ನಾವು ಎಂದು ಎಲ್ಲರೂ ಬೆಂಬಲಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಸಚಿವ ಸ್ಥಾನವೂ ಇಲ್ಲ, ಅತ್ತ ನಿಗಮ ಮಂಡಳಿಯೂ ಕೊಡಲ್ಲ ಎಂದು ಅವಮಾನ ಮಾಡಿದ ಸಮ್ಮಿಶ್ರ ಸರ್ಕಾರದ ನಾಯಕರಿಗೆ ಪಾಠ ಕಲಿಸಲೇಬೇಕು ಎಂದು ಪಣ ತೊಟ್ಟಂತಿರೋ ಶಾಸಕ ಸುಧಾಕರ್ ಈಗ ಪಕ್ಷ ಬಿಡೋಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಹಾಗೆ ಭಾಸವಾಗುತ್ತಿದೆ.