ಚಿಕ್ಕಬಳ್ಳಾಪುರ: ನಗರ ಹೊರವಲಯ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನಿರ್ಮಾಣ ಮಾಡಿರುವ ನೂತನ ಗಾಜಿನ ಮನೆ ತೆರವುಗೊಳಿಸಿ, ಕೆರೆಯ ಮೂಲ ಸ್ವರೂಪ ಮರುಸೃಷ್ಟಿ ಮಾಡುವಂತೆ ಲೋಕಾಯುಕ್ತ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಆದೇಶಿಸಿದೆ.
ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ, ಒಂದಲ್ಲ ಎರಡಲ್ಲ ಅಂತ ಸರಿ ಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೆರೆಯಂಗಳದಲ್ಲೇ 70 ಎಕೆರೆ ಪ್ರದೇಶಕ್ಕೆ ಕಾಂಪೌಂಡ್ ಹಾಕಿ, ಅದರೊಳಗೆ ಗಾಜಿನ ಮನೆ, ಉದ್ಯಾನವನ ಎಂದು ಗಿಡ ನೆಟ್ಟು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ.
Advertisement
Advertisement
70 ಎಕೆರೆ ವಿಶಾಲವಾದ ಪ್ರದೇಶದಲ್ಲಿ ಜಿಲ್ಲಾಡಳಿತದ ಅನುದಾನದಿಂದ ಮೂರೂವರೆ ಕೋಟಿ ಖರ್ಚು ಮಾಡಿ ಸುಸಜ್ಜಿತ ಗಾಜಿನ ಮನೆ ನಿರ್ಮಾಣವಾಗಿದ್ದು, ತೋಟಗಾರಿಕಾ ಇಲಾಖೆ ವತಿಯಿಂದ ಸರಿ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿ, 70 ಎಕೆರೆ ಪ್ರದೇಶಕ್ಕೆ ತಡೆಗೋಡೆ, ತಡೆಗೋಡೆಗೆ ಮುಖ್ಯ ದ್ವಾರ ಬಾಗಿಲು. ಅದರಲ್ಲಿ ಉದ್ಯಾನವನ ಅಭಿವೃದ್ಧಿ ಉದ್ಯಾನವನಕ್ಕೆ ನೀರೊದಗಿಸಲು ಕೊಳವೆಬಾವಿ, ಹಾಗೂ ನೀರು ಶೇಖರಿಸಲು ತೊಟ್ಟಿ, ವಾಚ್ ಗಾರ್ಡ್ ಮನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನ ನಡೆಸಲಾಗಿದೆ.
Advertisement
ಆದರೆ ಕೆರೆಗಳನ್ನು ಉಳಿಸಬೇಕಾದ ಅಧಿಕಾರಿಗಳೇ ಕೆರೆಗೆ ಕಂಟಕವಾಗಿದ್ದಾರೆ ಎಂದು ಬೆಂಗಳೂರು ಮೂಲದ ನಾರಾಯಣ ಎನ್ನುವವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿದ್ರು. ಕೆರೆಯ ನೀರು ಮುಳುಗಡೆ ಪ್ರದೇಶವನ್ನು ಸರ್ಕಾರಿ ಖರಾಬ್ ಅಂತ ಅಧಿಕಾರಿಗಳು ದಾಖಲೆಗಳಲ್ಲಿ ತಿದ್ದಿತೀಡಿ ಅದರಲ್ಲಿ 70 ಎಕೆರೆಯನ್ನು ಉದ್ಯಾನವನ ಮಾಡಿ ಗಾಜಿನ ಮನೆ ನಿರ್ಮಾಣ ಮಾಡಿದ್ದಾರೆ ಅಂತ ನಾರಾಯಣ ಎಂಬವರು ಲೋಕಾಯುಕ್ತ ಸಂಸ್ಥೆ ಮೊರೆ ಹೋದ ಕಾರಣ, ಪರ ವಿರೋಧ ವಾದ ಆಲಿಸಿದ ಲೋಕಾಯುಕ್ತರು, ಕೆರೆಯಲ್ಲಿ ಕಾಮಗಾರಿ ಮಾಡಿದ್ದು ತಪ್ಪು ಅಂತ ಎತ್ತಿ ಹಿಡಿದಿದ್ದು, ಕೆರೆಯಂಗಳದಲ್ಲಿ ನಿರ್ಮಿಸಿರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ತೆರವುಗೊಳಿಸಿ ಮೊದಲಿನಂತೆಯೇ ಕೆರೆಯನ್ನು ಮರುಸೃಷ್ಟಿಸಿ ಅಂತ ಆದೇಶ ಮಾಡಿದ್ದಾರೆ.
Advertisement
ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರ ಆದೇಶ ಅನುಷ್ಠಾನ ಮಾಡುವಂತೆ ಸೂಚಿಸಿದೆ. ಕೆರೆ ಹಾಗೂ ಕರೆಯಂಗಳದಲ್ಲಿ ಯಾವುದೇ ಕಾಮಗಾರಿಗಳನ್ನ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದ್ದರೂ, ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಈಗ ಸರಿಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರೋ ಗಾಜಿನಮನೆ ಎಲ್ಲವೂ ಕೆರೆಗೆ ಆಹಾರವಾಗಲಿದೆ ಎಂಬ ಆತಂಕ ಕಾಡುತ್ತಿದೆ.
ಇದ್ರಿಂದ ಸದ್ಯ ಪೇಚಿಗೆ ಸಿಲಿಕಿರೋ ಅಧಿಕಾರಿಗಳು ಗಾಜಿನಮನೆ ತೆರವು ಮಾಡೋದಾ ಇಲ್ಲ ಸುಮ್ಮನಿರೋದಾ ಎಂದು ಇಕ್ಕಟ್ಟಿಗೆ ಸಿಲುಕಿ ಮೀನಾಮೇಷ ಎಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಜನರ ತೆರಿಗೆ ಹಣದ ಆರೂವರೆ ಕೋಟಿ ಕೆರೆಯ ನೀರಿಗೆ ಹೋಮ ಮಾಡಿದಂತಾಗುತ್ತಿದೆಯಲ್ಲಾ ಎಂಬುದು ಸಹ ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.