ಸತ್ಯ ಹರಿಶ್ಚಂದ್ರನಂತೆ ಮಾತನಾಡೋ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ: ರಮೇಶ್ ಕುಮಾರ್‌ಗೆ ಸುಧಾಕರ್ ಪ್ರಶ್ನೆ

Public TV
2 Min Read
Sudhakar and Ramesh Kumar

– ಮಾಜಿ ಸಚಿವ ಶಿವಶಂಕರರೆಡ್ಡಿ ವಿರುದ್ಧವೂ ವಾಗ್ದಾಳಿ

ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರ ವಿರುದ್ಧ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ. ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್ ಅವರು, ರಮೇಶ್ ಕುಮಾರ್ ಅವರನ್ನು ನಾನು ಸ್ವಾಮಿ ಅಂತ ದೇವರ ಭಾವನೆಯಿಂದ ಕರೆಯುತ್ತಿದ್ದೆ. ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ರಮೇಶ್ ಕುಮಾರ್ ಅವರೇ ಮಾಜಿ ಸಿಎಂ ದೇವರಾಜು ಅರಸು ಅವರ ಜೊತೆಯಲ್ಲಿದ್ದ ನೀವು ರಾಮಕೃಷ್ಣ ಹೆಗೆಡೆ ಜೊತೆ ಯಾಕೆ ಸೇರಿಕೊಂಡಿರಿ? ನಂತರ ರಾಮಕೃಷ್ಣ ಹೆಗಡೆ ಅವರಿಂದ ಎಚ್.ಡಿ.ದೇವೇಗೌಡರ ಬಳಿ ಯಾಕೆ ಹೋದ್ರಿ? ನಿಮ್ಮನ್ನು 5 ವರ್ಷ ಸ್ಪೀಕರ್ ಆಗಿ ನೇಮಕ ಮಾಡಿದ್ದ ಎಚ್.ಡಿ.ದೇವೇಗೌಡರಿಗೆ ಕೈ ಕೊಟ್ಟು ಕೊನೆಗೆ ಕೆ.ಎಚ್.ಮುನಿಯಪ್ಪ ಹಾಗೂ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರಿ? ಇದು ಪಕ್ಷಾಂತರ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

CKB SUDHAKAR

ನೈತಿಕತೆ, ಪಾರದರ್ಶಕತೆ, ಧರ್ಮದ ಬಗ್ಗೆ ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ ಅಂತ ಹೇಳಿ. ವ್ಯಾಪಾರ ಎಂದು ಆರೋಪಿಸಿರುವ ನೀವು ಈ ಹಿಂದೆ ಮಾಡಿರೋದು ಏನು? ಸದನದಲ್ಲಿ ಹದ್ದುಗಳು ಅಂತ ಕರೆದ್ರಲ್ಲಾ ನೀವು ಯಾರು? ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಿಮಗೆ ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನೀವು ಹೇಗೆ ನಡೆದುಕೊಂಡ್ರಿ? ಅಧಿಕೃತ ವಿರೋಧ ಪಕ್ಷದವರ ತರ ಮಾತನಾಡುತ್ತಿದ್ರಲ್ಲಾ ಮಿನಿಸ್ಟರ್ ಪೋಸ್ಟ್ ಕೊಟ್ಟ ಮೇಲೆ ಸೈಲೆಂಟ್ ಆಗಿದ್ದು ಯಾಕೆ? ಅಧಿಕಾರ ಇಲ್ಲದಾಗ ಒಂದು ರೀತಿ. ಇರುವಾಗ ಮತ್ತೊಂದು ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಕಿಡಿಕಾರಿದರು.

ನೈತಿಕತೆ ಇದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜೀನಾಮೆ ಕೊಡಿ ಎಂದು ಗೌರಿಬಿದನೂರು ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಅವರು, ಅನರ್ಹ ಶಾಸಕ ಸುಧಾಕರ್ ಅವರಿಗೆ ಆಗ್ರಹಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ನನ್ನ ಶಾಸಕ ಸ್ಥಾನದ ಬೆಂಬಲದಿಂದಲೇ ಶಿವಶಂಕರರೆಡ್ಡಿ ಅವರು 14 ತಿಂಗಳು ಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಅವರು ಮಂತ್ರಿ ಆಗುವುದಕ್ಕೆ ನನ್ನ ಪಾಲು ಇದೆ. ಹೀಗಾಗಿ ನಾನು ಪಿಸಿಬಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೆಲವೇ ದಿನಗಳು ಕಳೆದಿವೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

Shivashankara Reddy

ಗೌರಿಬಿದನೂರು ಕ್ಷೇತ್ರದಲ್ಲಿ ಏನೆಲ್ಲಾ ನಡೆಯುತ್ತಿದೆ ಅಂತ ನನಗೆ ಗೊತ್ತಿದೆ. ನಿಮ್ಮ ಗುರುಗಳು, ತಂದೆ ಸಮಾನರಾದ ದಿವಂಗತ ಅಶ್ವತ್ಥರಾಯಣರೆರಡ್ಡಿ ಅವರ ವಿರುದ್ಧವೇ ಸ್ಫರ್ಧಿಸಿ ಸೋಲಿಸಿದರಲ್ಲಾ ಆಗ ಎಲ್ಲಿ ಹೋಗಿತ್ತು ನಿಮ್ಮ ನೈತಿಕತೆ? ಎಸಿಸಿ ಕಾರ್ಖಾನೆಯ ಜೊತೆ ನಿಮ್ಮ ಒಂಡಬಂಡಿಕೆ ಏನು ಅಂತ ಗೊತ್ತಿದೆ. ಎಸಿಸಿ ಸಿಮೆಂಟ್ ಕಾರ್ಖಾನೆಗೆ ಬೇಕಾಗುವ ಚೀಲ ತಯಾರಿಕಾ ಕಾರ್ಖಾನೆಯನ್ನು ನಿಮ್ಮ ಮಗ ಆರಂಭಿಸಿರುವುದು ಗೊತ್ತಿದೆ. ಸಾದಲಿ ಬಳಿ ಕಲ್ಲು ಗಣಿಗಾರಿಕೆ ಮಾಡುವುಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಶಿವಶಂಕರರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *