ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ವಿರುದ್ಧ ಮತ್ತೋರ್ವ ಕಾಂಗ್ರೆಸ್ ಶಾಸಕ ಸಿಡಿದೆದ್ದಿದ್ದು ಕೆಲಸಕ್ಕೆ ಬಾರದ ನಿಗಮ ಮಂಡಳಿ ಬೇಡವೇ ಬೇಡ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದ್ದಾರೆ.
ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು ನಿಜ. ನನಗೆ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮ ಮಂಡಳಿ ಕೊಟ್ಟಿದ್ರು. ಆದರೆ ನನಗೆ ಆ ನಿಗಮ ಮಂಡಳಿ ಬೇಡ ಎಂದು ಅಂದೇ ಹೇಳಿದ್ದೆ. ಬಲವಂತವಾಗಿ ಕೊಟ್ಟರೂ ನಾನು ಇದುವರೆಗೂ ನಿಗಮ ಮಂಡಳಿಯ ಕಾರ್ಯಭಾರವನ್ನೇ ತೆಗೆದುಕೊಂಡಿಲ್ಲ. ಹೀಗಾಗಿ ಕೆಲಸಕ್ಕೆ ಬಾರದ ನಿಗಮ ಮಂಡಳಿ ನನಗೆ ಬೇಡ ಎಂದು ಹೇಳಿದ್ದಾರೆ.
Advertisement
Advertisement
ಪಕ್ಷದಲ್ಲಿ ಬೇರೆ ಯಾರಾದರು ಇದ್ದರೆ ಅವರಿಗೆ ಆ ನಿಗಮ ಮಂಡಳಿ ಕೊಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗೂಂಡೂರಾವ್ ಹಾಗೂ ಸಿಎಂ ಕುಮಾರಸ್ವಾಮಿ ತಿಳಿಸಿರುವುದಾಗಿ ಹೇಳಿದರು.
Advertisement
ಸಣ್ಣ ಕೈಗಾರಿಕಾ ಇಲಾಖೆಯ ಸಚಿವರಾಗಿ ಜೆಡಿಎಸ್ ನ ಸಾರಾ ಮಹೇಶ್ ಅವರು ಇದ್ದಾರೆ. ಹೀಗಾಗಿ ನಮಗೂ ಅವರಿಗೂ ಹೊಂದಾಣಿಕೆ ಕಷ್ಟಸಾಧ್ಯ. ಹೀಗಾಗಿ ತುಂಬಾ ರಿಸ್ಕ್ ತೆಗೆದುಕೊಳ್ಳೋದು ಬೇಡ ಎಂದು ನಿಗಮ ಮಂಡಳಿ ಬೇಡ ಎಂದಿದ್ದೇನೆ. ಕೊಡುವುದಾದರೆ ಯಾವುದಾದರೂ ತಮ್ಮ ಕ್ಷೇತ್ರದ ಜನರ ಅಭಿವೃದ್ಧಿಗೆ ಉಪಯೋಗವಾಗುವಂತಹ ಗ್ರಾಮೀಣಾಭಿವೃದ್ಧಿ ನಿಗಮ ಕೊಡಲಿ ಎಂದಿದ್ದಾರೆ.
Advertisement
ಪುಲ್ವಾಮಾ ಫಿಲಂ ನೋಡಿ ಬಿಜೆಪಿಗೆ ಮತ:
ಪುಲ್ವಾಮಾ ಫಿಲಂ ನೋಡಿ ದೇಶದಲ್ಲೆಲ್ಲಾ ಬಿಜೆಪಿಗೆ ಮತ ನೀಡಲಾಗಿದೆ. ಬಿಜೆಪಿ ಫಿಲ್ಮ್ ನೋಡಿ ವೋಟು ಹಾಕಿದ್ದಾರೆಯೇ ಹೊರತು ಬೇರೇನೂ ಇಲ್ಲ. ಅಭಿನಂದನ್ ಹೀರೋ ತರ ಕರೆ ತಂದಿದ್ದು ನೋಡಿ ಬಿಜೆಪಿಗೆ ಮತ ಹಾಕಿದ್ದಾರೆ. ನಾನು ಅದನ್ನ ನೋಡಿ ಸಿನಿಮಾ ರೀತಿ ಭಾಸವಾಯಿತು. ಪುಲ್ವಾಮಾ ದಾಳಿಯಿಂದ ಬಿಜೆಪಿ ಸಾಕಷ್ಟು ಪ್ರಚಾರ ಪಡೆಯಿತು. ಮಾಧ್ಯಮಗಳು ಕೂಡ ಅದನ್ನ ಸಾಕಷ್ಟು ಪ್ರಚಾರ ಮಾಡಿದವು. ಆದ್ದರಿಂದಲೇ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಹಿನ್ನೆಡೆಗೆ ಮೈತ್ರಿಯೂ ಒಂದು ಕಾರಣ ಎಂದು ಅವರು ತಿಳಿಸಿದರು.