ಚಿಕ್ಕಬಳ್ಳಾಪುರ: ಸಚಿವ ಸಂಪುಟ ರಚನೆಗೆ ರಾಜ್ಯ ಕಾಂಗ್ರೆಸ್ ನಾಯಕರು ಕಸರತ್ತು ನಡೆಸುತ್ತಾ ದೆಹಲಿಯ ಹೈಕಮಾಂಡ್ ಭೇಟಿಗೆ ತೆರಳುವ ಮುನ್ನವೇ, ಕಾಂಗ್ರೆಸ್ ಶಾಸಕ ಹಾಗೂ ಬೆಂಬಲಿಗರು ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ದೆಹಲಿಗೆ ದೌಡಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಹಾಗೂ ಅವರ ಬೆಂಬಲಿಗರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. 5 ಬಾರಿ ಸತತವಾಗಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಎನ್.ಎಚ್ ಶಿವಶಂಕರರೆಡ್ಡಿಗೆ ಸಚಿವ ಸ್ಥಾನ ಕೊಡುವಂತೆ ರಾಹುಲ್ ಗಾಂಧಿಯವರಿಗೆ ಒತ್ತಾಯ ಮಾಡಲು ಮುಂದಾಗಿದ್ದಾರೆ.
Advertisement
ಶಾಸಕ ಶಿವಶಂಕರರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಹೊಸೂರು ಮಂಜುನಾಥ್ ಸೇರಿದಂತೆ 15 ಮಂದಿ ಬೆಂಬಲಿಗರು ದೆಹಲಿಯ ಹೋಟೆಲ್ ನಲ್ಲಿ ಈಗಾಗಲೇ ವಾಸ್ತವ್ಯ ಹೂಡಿದ್ದಾರೆ. ಸಂಸದ ಮೊಯ್ಲಿ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿ ಭೇಟಿಗೆ ಶಾಸಕ ಶಿವಶಂಕರರೆಡ್ಡಿ ಮುಂದಾಗಿದ್ದಾರೆ ಅಂತ ತಿಳಿದುಬಂದಿದೆ.
Advertisement
5 ಕ್ಷೇತ್ರಗಳ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ನಾಲ್ವರು ಕಾಂಗ್ರೆಸ್ ಶಾಸಕರ ಪೈಕಿ ಮೂವರ ನಡುವೆ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ ಸುಧಾಕರ್ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಸೇರಿದಂತೆ ಶಿವಶಂಕರರೆಡ್ಡಿ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಮೂವರು ಕೂಡ ಪ್ರಬಲ ಒಕ್ಕಲಿಗ ರೆಡ್ಡಿ ಸಮುದಾಯಕ್ಕೆ ಸೇರಿದವರಾದ ಕಾರಣ ಎರಡನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿರುವ ಸುಧಾಕರ್, ಸಚಿವ ಸ್ಥಾನಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಮಾಜಿ ಸಚಿವ ವಿ.ಮುನಿಯಪ್ಪ ಕೂಡ ಹಿರಿತನ-ಅನುಭವದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ.
Advertisement