ಚಿಕ್ಕಬಳ್ಳಾಪುರ: ದೇಶವ್ಯಾಪಿ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ ಕರೆ ಹಿನ್ನಲೆಯಲ್ಲಿ ನಾಳೆ(ಬುಧವಾರ) ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ ಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆ ಕರೆ ನೀಡಿದೆ.
ಕನಿಷ್ಠ ವೇತನ, ಖಾತ್ರಿ ಮಾಸಿಕ ಪಿಂಚಣಿ, ಸಮಾನ ಕೆಲಸಕ್ಕೆ ಸಮಾನವೇತನ ಜಾರಿ ಮಾಡಿ ಗುತ್ತಿಗೆ ಪದ್ಧತಿ ರದ್ದತಿ, ಕಾರ್ಮಿಕರ ವಿವಿಧ ಬೇಡಿಕೆಗಳನ್ನ ಈಡೇರಿಕೆಗಾಗಿ ನಾಳೆ ಬಂದ್ ಗೆ ಕರೆ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಪಿಐಎಂ ಪಕ್ಷದ ಮುಖಂಡ ಮುನಿವೆಂಕಟಪ್ಪ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಎಲ್ಲಾ ಆರು ತಾಲೂಕುಗಳಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಬಂದ್ ಗೆ ಕರ್ನಾಟಕ ಪ್ರಾಂತ ರೈತ ಸಂಘ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಭಾರತ ಕಮ್ಯೂನಿಸ್ಟ್ ಪಕ್ಷವಷ್ಟೇ ಬೆಂಬಲ ನೀಡಿರುವುದರಿಂದ ಬಂದ್ ಯಶಸ್ವಿಯಾಗುತ್ತಾ ಇಲ್ವಾ ಎಂಬುದನ್ನು ಕಾದು ನೋಡಬೇಕಿದೆ.