ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ವೇಳೆ ರಸ್ತೆ ಅಪಘಾತ ಸೇರಿದಂತೆ ಇತರೆ ಅವಘಡಗಳು ಸಂಭವಿಸಬಹುದು ಎಂಬ ಉದ್ದೇಶದಿಂದ ಮುನ್ನಚ್ಚರಿಕಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ 108 ಸಿಬ್ಬಂದಿ ಸನ್ನದ್ಧರಾಗಿದ್ದಾರೆ.
ಜಿಲ್ಲೆಯ 16 ಆರೋಗ್ಯ ಕವಚ ಅಂಬುಲೆನ್ಸ್ ಗಳು ಸೇವೆಗೆ ಸಿದ್ಧವಾಗಿದ್ದು, ಸಿಬ್ಬಂದಿ ಸಹ ಜನರ ಸೇವೆಗೆ ನಾವಿದ್ದೇವೆ ಅಂತಿದ್ದಾರೆ. ಹೊಸ ವರ್ಷಾಚರಣೆ ವೇಳೆ ಉಳಿದ ದಿನಕ್ಕಿಂತ ಶೇ.30 ರಿಂದ 35 ರಷ್ಟು ಹೆಚ್ಚಿನ ಅಪಘಾತ ಸಂಭವಿಸುತ್ತವೆ ಎಂದು ಹಿಂದಿನ ಅಂಕಿ ಅಂಶಗಳಿಂದ ಋಜುವಾತಾಗಿದೆ. ಹೀಗಾಗಿ ಹೊಸ ವರ್ಷಾಚರಣೆ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಪ್ರಾಣ ಹಾನಿಯನ್ನು ತಪ್ಪಿಸಲು 108 ಆರೋಗ್ಯ ಕವಚ ಸೇವೆ ಸನ್ನದ್ಧಗೊಂಡಿದೆ.
ಹೊಸ ವರ್ಷಾಚರಣೆ ನಡೆಯುವ ಸ್ಥಳ ಹಾಗೂ ಪ್ರಮುಖವಾಗಿ ಆಕ್ಸಿಡೆಂಟಲ್ ಜೋನ್ ಸೇರಿದಂತೆ ಹೈವೇಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗುತ್ತದೆ. ಹೆಚ್ಚುವರಿ ಸೇವೆಗಾಗಿ 108 ಅಂಬುಲೆನ್ಸ್ ಸಿಬ್ಬಂದಿಗಳು ಹೆಚ್ಚಿನ ಕೆಲಸ ಮಾಡುವಂತೆ ಪ್ರೇರೇಪಿಸಿ, ಕಾಲ್ ಸೆಂಟರ್ ಹಾಗೂ ಇತರೆ ಸಿಬ್ಬಂದಿಯ ರಜೆಗಳನ್ನು ಸಹ ರದ್ದುಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ನಂದಿ ಗಿರಿಧಾಮ ತಪ್ಪಲು ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ಅಪಘಾತ ನಡೆಯುಬಹುದಾದ ರಸ್ತೆಗಳ ಬಳಿ ಅಂಬುಲೆನ್ಸ್ ಗಳನ್ನ ನಿಯೋಜಿಸಲಾಗುವುದು. ಸಾರ್ವಜನಿಕರು ಯಾವುದೇ ತುರ್ತು ಸಂದರ್ಭಸಲ್ಲಿ ಟೋಲ್ ಫ್ರೀ ನಂಬರ್ 108 ಗೆ ಕರೆ ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಕವಚ ಸೇವೆಯ 108 ಅಂಬುಲೆನ್ಸ್‍ಗಳ ಜಿಲ್ಲಾ ವ್ಯವಸ್ಥಾಪಕ ಕಪಿಲ್ ತಿಳಿಸಿದ್ದಾರೆ.